ಮಧುಗಿರಿ: ಬರ ನಿರ್ವಹಣೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ತೋರಿದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬರ ನಿರ್ವಹಣೆ, ಕುಡಿಯುವ ನೀರು ಹಾಗೂ ಮೇವಿನ ಕೊರತೆ ಕುರಿತು ನಡೆದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಬರ ಪರಿಸ್ಥಿತಿ ಗಂಭೀರವಾಗಿದ್ದು, ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಜಾನುವಾರುಗಳು ಕಸಾಯಿಖಾನೆಗಳಿಗೆ ಸಾಗುವುದನ್ನು ತಡೆಯುವ ನಿಟ್ಟಿನಲ್ಲಿ ಗ್ರಾಮಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕು. ಖಾಸಗಿ ಕೊಳವೆಬಾವಿಗಳಿಂದ ನೀರು ಪಡೆಯಲು ಆದ್ಯತೆ ನೀಡಬೇಕು. ಕೊಳವೆಬಾವಿಗಳ ನೀರನ್ನು ಪರೀಕ್ಷಿಸಿದ ಬಳಿಕವೇ ಸಾರ್ವಜನಿಕರಿಗೆ ಪೂರೈಸಬೇಕು. ನೀರಿನ ಗುಣಮಟ್ಟದಿಂದ ಯಾವುದೇ ಅನಾಹುತ ಸಂಭವಿಸಿದರೂ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಕೊಳವೆಬಾವಿ ಕೊರೆಯಲು ಹಾಗೂ ಖಾಸಗಿ ಕೊಳವೆಬಾವಿ ಮಾಲೀಕರಿಗೆ ಹಣ ಪಾವತಿಸಲು ಅನುದಾನದ ಕೊರತೆಯಿದೆ ಎಂದು ಅಧಿಕಾರಿಗಳು ತಿಳಿಸಿದಾಗ ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು. ನೀರಾವರಿ ಇಲಾಖೆ ಇಇ ವಾಸುದೇವ್ ಅವರನ್ನು ಉದ್ದೇಶಿಸಿ, ಇಲಾಖೆಯಲ್ಲಿ ಒಂದು ಕೋಟಿ ರೂ. ಅನುದಾನವಿದ್ದರೂ ಬಳಕೆ ಮಾಡಿಕೊಳ್ಳದೆ ಏಕೆ ಉಳಿಸಿಕೊಂಡಿದ್ದೀರಿ? ಶೀಘ್ರವೇ ಬಳಕೆ ಪ್ರಮಾಣಪತ್ರದ (ಯುಸಿ) ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ತಹಶೀಲ್ದಾರ್ ಖಾತೆಯಲ್ಲಿ 45 ಲಕ್ಷ ರೂ. ಅನುದಾನವಿದ್ದು, ಮುಂದಿನ ಸಭೆಯೊಳಗೆ ಕನಿಷ್ಠ 10 ಲಕ್ಷ ರೂ. ವೆಚ್ಚ ಮಾಡಿರಬೇಕು ಎಂದು ಗಡುವು ನೀಡಿದರು. ಹಲವು ಗ್ರಾಮಗಳಿಗೆ ಎರಡು ಕಿ.ಮೀ. ದೂರದಿಂದ ಪೈಪ್ಲೈನ್ ಅಳವಡಿಸಿ ನೀರು ಪೂರೈಸಬೇಕಾದ ಪರಿಸ್ಥಿತಿಯಿದ್ದು, ಇದಕ್ಕೆ ಅನುದಾನವಿಲ್ಲ ಎಂದು ಪಿಡಿಓಗಳು ಅಸಹಾಯಕತೆ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಅಶ್ವಿಜಾ, ಮೊದಲು ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪಡೆಯಲು ಆದ್ಯತೆ ನೀಡಬೇಕು. ನಂತರ ದುರಸ್ತಿ ಮತ್ತು ಮರುಕೊರೆತಕ್ಕೆ ಕ್ರಮ ಕೈಗೊಂಡು, ಕೊನೆಯ ಆಯ್ಕೆಯಾಗಿ ಹೊಸ ಕೊಳವೆಬಾವಿ ಕೊರೆಯಬೇಕು ಎಂದು ತಿಳಿಸಿದರು.
ಜಿಲ್ಲೆಗೆ 277 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ಸೂಚನೆ ನೀಡಲಾಗಿದೆ. ನವೆಂಬರ್ 29ರೊಳಗೆ ಅಗತ್ಯ ದಾಖಲೆಗಳನ್ನು ಸಮಗ್ರವಾಗಿ ಸಲ್ಲಿಸಬೇಕು. ಜಿಲ್ಲೆಯಲ್ಲಿ 260 ಕುಡಿಯುವ ನೀರಿನ ಘಟಕಗಳು ದುರಸ್ತಿಯಲ್ಲಿದ್ದು, ಮಧುಗಿರಿ ತಾಲೂಕಿನಲ್ಲಿ 45 ಘಟಕಗಳಿವೆ. ರಸ್ತೆ, ಚರಂಡಿ ಸೇರಿದಂತೆ ಇತರೆ ಕಾಮಗಾರಿಗಳನ್ನು ಟಾಸ್ಕ್ಫೋರ್ಸ್ ಸಭೆಯ ಅನುಮೋದನೆ ಪಡೆದು ಕೈಗೊಳ್ಳಬೇಕು. ಪಟ್ಟಿಯಲ್ಲಿ ಇಲ್ಲದ ಕಾಮಗಾರಿಗಳಿಗೆ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಸಿದರು.
ಅಧಿಕಾರಿಗಳು ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂಬ ದೂರುಗಳಿದ್ದು, ಎಲ್ಲರೂ ಕೇಂದ್ರಸ್ಥಾನದಲ್ಲಿದ್ದು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ತಾಲೂಕಿನಲ್ಲಿ 42 ಹೊಸ ಕೊಳವೆಬಾವಿಗಳಿಗೆ ಅವಕಾಶವಿದೆ. ಹೆಚ್ಚುವರಿಯಾಗಿ 277 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದ್ದು, ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು. ತಾಲೂಕಿನಲ್ಲಿ 10 ಸಾವಿರ ನಿವೇಶನಗಳನ್ನು ವಿತರಿಸಲು ಸಿದ್ಧತೆ ನಡೆದಿದ್ದು, 1,200 ಚದರ ಅಡಿ ನಿವೇಶನ ನೀಡುವ ಯೋಜನೆಯಿದೆ. ಗ್ರಾಮ ಪಂಚಾಯಿತಿಗಳಿಂದ ಗ್ರಂಥಾಲಯ ಹಾಗೂ ಭಿಕ್ಷುಕರ ಶೇ.3ರ ಸೆಸ್ ಪಾವತಿಸುವಂತೆ ಆಯುಕ್ತರು ಆದೇಶಿಸಿದ್ದು, ತೆರಿಗೆ ಸೇರಿದಂತೆ ಈ ಮೊತ್ತವನ್ನು ಮಾರ್ಚ್ ಒಳಗೆ ಪಾವತಿಸಬೇಕು ಎಂದು ತಿಳಿಸಿದರು.
— ಅಶ್ವಿಜಾ, ಸಿಇಒ, ಜಿಲ್ಲಾ ಪಂಚಾಯಿತಿ, ತುಮಕೂರು.
ಅನುದಾನ ನೀಡದೆ ನಮ್ಮನ್ನು ಹೊಣೆಗಾರರನ್ನಾಗಿಸಬೇಡಿ: 26 ಪಿಡಿಓಗಳ ಅಳಲು!
ಬರ ನಿರ್ವಹಣೆಯ ವೈಫಲ್ಯಕ್ಕೆ ಪಿಡಿಓಗಳನ್ನೇ ಹೊಣೆಗಾರರನ್ನಾಗಿ ಮಾಡುವ ಮುನ್ನ ಗ್ರಾಮ ಪಂಚಾಯಿತಿಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಮಧುಗಿರಿ ತಾಲೂಕಿನ 26 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಒತ್ತಾಯಿಸಿದ್ದಾರೆ.
ಬರ ಪರಿಸ್ಥಿತಿ ಗಂಭೀರವಾಗಿದ್ದು, ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪಡೆದು ಜನರು ಹಾಗೂ ಜಾನುವಾರುಗಳನ್ನು ರಕ್ಷಿಸಬೇಕು. ಖಾಸಗಿ ಕೊಳವೆಬಾವಿ ಮಾಲೀಕರಿಗೆ ಬಾಕಿ ಮೊತ್ತ ಸೇರಿದಂತೆ ತಕ್ಷಣ ಹಣ ಪಾವತಿಸಿ ಅವರ ವಿಶ್ವಾಸ ಉಳಿಸಿಕೊಳ್ಳಬೇಕು. ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿದ್ದು, ಮುಂದಿನ ಸಭೆಯೊಳಗೆ ಸಮಸ್ಯೆಗಳನ್ನು ಬಗೆಹರಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರು.
— ಶುಭ ಕಲ್ಯಾಣ್, ಜಿಲ್ಲಾಧಿಕಾರಿ, ತುಮಕೂರು.
ಕಳೆದ ಎರಡು ವರ್ಷಗಳಿಂದ 14ನೇ ಮತ್ತು 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದ ಗ್ರಾಮಗಳ ಸ್ವಚ್ಛತೆ, ಸಿಬ್ಬಂದಿಗಳ ವೇತನ ಹಾಗೂ ಕಚೇರಿ ನಿರ್ವಹಣೆಗೂ ಹಣದ ಕೊರತೆ ಎದುರಾಗಿದೆ. ಮೂಲಭೂತ ಸೌಕರ್ಯಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಅಂಗಡಿಗಳಲ್ಲಿ ಪಡೆದ ಸಾಮಗ್ರಿಗಳ ಬಿಲ್ಗಳನ್ನೂ ಪಾವತಿಸಲು ಸಾಧ್ಯವಾಗುತ್ತಿಲ್ಲ. ಸಾಲ ಮಾಡಿಕೊಂಡು ಗ್ರಾಮಗಳಲ್ಲಿ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪಿಡಿಓಗಳು ಅಳಲು ತೋಡಿಕೊಂಡಿದ್ದಾರೆ.
ಈ ಸಮಸ್ಯೆ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಮುಂದುವರಿದಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಬಹಿಷ್ಕರಿಸುವಂತಹ ಸನ್ನಿವೇಶ ಎದುರಾಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
ಅನುದಾನ ಬಿಡುಗಡೆ ಮಾಡದೆ ಕರ್ತವ್ಯಲೋಪದ ಆರೋಪ ಹೊರಿಸಿ ಪಿಡಿಓಗಳನ್ನು ಹೊಣೆಗಾರರನ್ನಾಗಿ ಮಾಡಬಾರದು ಎಂದು ಒತ್ತಾಯಿಸಿ 26 ಪಿಡಿಓಗಳು ಸಹಿ ಮಾಡಿರುವ ಮನವಿಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಅಶ್ವಿಜಾ ಅವರಿಗೆ ಸಲ್ಲಿಸಿದ್ದಾರೆ. ಗ್ರಾಮ ಪಂಚಾಯಿತಿಗಳ ಆರ್ಥಿಕ ಸಂಕಷ್ಟದ ವಿಚಾರ ಇದೀಗ ಸಭೆಯಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿದೆ.
ಸಭೆಯಲ್ಲಿ ಎಸಿ ಗೋಟೂರು ಶಿವಪ್ಪ, ತಹಶೀಲ್ದಾರ್ ನಂದಿನಿ, ಡಿವೈಎಸ್ಪಿ ಮಂಜುನಾಥ್, ಇಒ ಉತ್ತಮ್, ನೀರಾವರಿ ಇಲಾಖೆ ಇಇ ವಾಸುದೇವ್ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
