ಮನೆಮನೆಗೂ ಅಡುಗೆ ಅನಿಲದ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಪಿಜಿ (LPG) ಗ್ರಾಹಕರಿಗೆ ಇ-ಕೆವೈಸಿ (e-KYC) ಪ್ರಕ್ರಿಯೆ ಕುರಿತು ಮಹತ್ವದ ಮಾಹಿತಿ ಹೊರಬಿದ್ದಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಗ್ಯಾಸ್ ಸಿಲಿಂಡರ್ಗಳ ಹೊಸ ದರಗಳನ್ನು ಪ್ರಕಟಿಸುತ್ತವೆ. ಡಿಸೆಂಬರ್ ತಿಂಗಳು ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗ, ಇ-ಕೆವೈಸಿ ಪೂರ್ಣಗೊಳಿಸದ ಗ್ರಾಹಕರಿಗೆ ಸಿಲಿಂಡರ್ ಬುಕಿಂಗ್ ಸೌಲಭ್ಯ ಸ್ಥಗಿತಗೊಳ್ಳುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಇ–ಕೆವೈಸಿ ಮಾಡಿಸದಿದ್ದರೆ ಗ್ಯಾಸ್ ಬುಕ್ಕಿಂಗ್ ಬಂದ್ ಆಗುತ್ತಾ?
ಎಲ್ ಪಿಜಿ ಸಂಪರ್ಕಕ್ಕೆ ಇ-ಕೆವೈಸಿ ಪೂರ್ಣಗೊಳಿಸುವಂತೆ ಗ್ರಾಹಕರಿಗೆ ಸೂಚಿಸಲಾಗಿದೆ. ಆದರೆ ಇ-ಕೆವೈಸಿ ಮಾಡಿಸಿಲ್ಲ ಎಂಬ ಕಾರಣಕ್ಕೆ ಡಿಸೆಂಬರ್ 1ರಿಂದಲೇ ಸಿಲಿಂಡರ್ ಬುಕ್ ಮಾಡುವ ಸೌಲಭ್ಯ ಸ್ಥಗಿತಗೊಳ್ಳುತ್ತದೆ ಎಂಬ ಆತಂಕಕ್ಕೆ ಸದ್ಯಕ್ಕೆ ಕಾರಣವಿಲ್ಲ.ಇ-ಕೆವೈಸಿ ಪೂರ್ಣಗೊಳಿಸದಿದ್ದರೂ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ತಕ್ಷಣವೇ ಸ್ಥಗಿತಗೊಳ್ಳುವುದಿಲ್ಲ ಅಥವಾ ಸಂಪರ್ಕ ಕಡಿತಗೊಳ್ಳುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಆದರೂ ಗ್ರಾಹಕರು ಈ ಪ್ರಕ್ರಿಯೆಯನ್ನು ನಿರ್ಲಕ್ಷಿಸಬಾರದು. ವಿಶೇಷವಾಗಿ ಸರ್ಕಾರದ ಸಬ್ಸಿಡಿ ಪಡೆಯುವ ಫಲಾನುಭವಿಗಳು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಮುಖ್ಯವಾಗಿದೆ.
ಇ–ಕೆವೈಸಿ ಮಾಡಿಸದಿದ್ದರೆ ಸಬ್ಸಿಡಿ ಸಿಗುವುದಿಲ್ಲವೇ?
ಎಲ್ ಪಿಜಿ ಸಿಲಿಂಡರ್ಗಳ ಮೇಲೆ ಸರ್ಕಾರದಿಂದ ಸಹಾಯಧನ ಪಡೆಯುವ ಗ್ರಾಹಕರು ಬಯೋಮೆಟ್ರಿಕ್ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಬಹುದು. ಇ-ಕೆವೈಸಿ ಬಾಕಿ ಉಳಿದಿದ್ದರೆ ಸಬ್ಸಿಡಿ ಜಮೆಯಾಗುವ ವಿಚಾರದಲ್ಲಿ ತೊಂದರೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಸಬ್ಸಿಡಿ ಸೌಲಭ್ಯ ನಿರಂತರವಾಗಿ ಪಡೆಯಲು ಗ್ರಾಹಕರು ತಮ್ಮ ಇ-ಕೆವೈಸಿ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.
ಮೊಬೈಲ್ ಮೂಲಕ ಇ–ಕೆವೈಸಿ ಪೂರ್ಣಗೊಳಿಸುವುದು ಹೇಗೆ?
ಗ್ರಾಹಕರು ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಮೊದಲು ನಿಮ್ಮ ಗ್ಯಾಸ್ ಕಂಪನಿಯ ಅಧಿಕೃತ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ. ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಆಗಿ ‘LPG’ ವಿಭಾಗಕ್ಕೆ ತೆರಳಿ ‘e-KYC’ ಆಯ್ಕೆಯನ್ನು ಆರಿಸಿಕೊಳ್ಳಿ. ನಂತರ ಆಧಾರ್ಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ನಮೂದಿಸಿ.
ಆ್ಯಪ್ ಸೂಚಿಸಿದರೆ ‘Aadhaar FaceRD’ ಆ್ಯಪ್ ಇನ್ ಸ್ಟಾಲ್ ಮಾಡಿಕೊಂಡು ಮುಖದ ಸ್ಕ್ಯಾನ್ ಪ್ರಕ್ರಿಯೆ ಪೂರ್ಣಗೊಳಿಸಿ. ಪರದೆಯ ಮೇಲೆ ನೀಡುವ ಸೂಚನೆಗಳನ್ನು ಅನುಸರಿಸಿದ ಬಳಿಕ ಇ-ಕೆವೈಸಿ ಪೂರ್ಣಗೊಂಡಿದೆಯೇ ಎಂಬುದನ್ನು ಪರಿಶೀಲಿಸಿ.
ಇ–ಕೆವೈಸಿ ಸ್ಥಿತಿ ಪರಿಶೀಲಿಸುವುದು ಹೇಗೆ?
ನಿಮ್ಮ ಗ್ಯಾಸ್ ಕಂಪನಿಯ ಅಧಿಕೃತ ಆ್ಯಪ್ ಗೆ ಲಾಗಿನ್ ಆಗಿ ‘Menu’ ವಿಭಾಗದಲ್ಲಿರುವ ‘My Profile’ ಆಯ್ಕೆಯನ್ನು ತೆರೆಯಿರಿ. ಬಳಿಕ ‘LPG Details’ ವಿಭಾಗಕ್ಕೆ ತೆರಳಿ e-KYC ಅಥವಾ Re-KYC ಸ್ಥಿತಿಯನ್ನು ಪರಿಶೀಲಿಸಿ.ಅಲ್ಲಿ ‘Valid’ ಎಂದು ತೋರಿಸಿದರೆ ನಿಮ್ಮ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದರ್ಥ. ‘Pending’ ಎಂದು ತೋರಿಸಿದರೆ ಪ್ರಕ್ರಿಯೆ ಇನ್ನೂ ಬಾಕಿ ಇದೆ ಎಂದರ್ಥ. ಅಂತಹ ಸಂದರ್ಭದಲ್ಲಿ ಮತ್ತೊಮ್ಮೆ ಪರಿಶೀಲಿಸಿ, ಅಗತ್ಯವಿದ್ದರೆ ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.
ಇ-ಕೆವೈಸಿ ಮಾಡಿಸಿಲ್ಲ ಎಂಬ ಕಾರಣಕ್ಕೆ ಡಿಸೆಂಬರ್ 1ರಿಂದಲೇ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಸ್ಥಗಿತವಾಗುತ್ತದೆ ಎಂಬ ಆತಂಕ ಬೇಡ. ಆದರೆ ಸಬ್ಸಿಡಿ ಸೇರಿದಂತೆ ಸರ್ಕಾರಿ ಸೌಲಭ್ಯಗಳಲ್ಲಿ ಯಾವುದೇ ತೊಂದರೆಯಾಗದಂತೆ ಗ್ರಾಹಕರು ತಮ್ಮ ಕೆವೈಸಿ ವಿವರಗಳನ್ನು ನವೀಕರಿಸಿಕೊಳ್ಳುವುದು ಉತ್ತಮ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
