ನಮ್ಮತುಮಕೂರು ವಿಶೇಷ ವರದಿ: ಮನೆ ಇಲ್ಲದೆ ಗುಡಿಸಿಲಲ್ಲಿ ವಾಸ ಮಾಡುತ್ತಿದ್ದು ಮನೆ ಕಟ್ಟಿಕೊಳ್ಳಲು ಸಹಾಯ ಮಾಡಿ ಎಂದು ಬಾಲಕಿ ಒಬ್ಬಳು ರಾಷ್ಟ್ರಪತಿಗೆ ಪತ್ರ ಬರೆದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ತಕ್ಷಣ ಸ್ಪಂದಿಸಿರುವ ರಾಷ್ಟ್ರಪತಿ ಭವನದ ಕಚೇರಿ ಅಧಿಕಾರಿಗಳು ತುಮಕೂರು ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತುಮಕೂರು ಜಿಲ್ಲೆ, ತುರುವೇಕೆರೆ ತಾಲೂಕಿನ ತೂಯಲಹಳ್ಳಿ ಗ್ರಾಮದ ವಾಸಿಯಾಗಿರುವ ಲಕ್ಷ್ಮೀ ಎಂಬ ವಿದ್ಯಾರ್ಥಿನಿ ಮನವಿಯನ್ನು ಪರಿಶೀಲಿಸುವಂತೆ ರಾಷ್ಟ್ರಪತಿ ಅಧೀನ ಕಾರ್ಯದರ್ಶಿಗಳಿಂದ ಪತ್ರ ಬರೆದಿದ್ದಾರೆ.
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಆದೇಶದನ್ವಯ ಶಾಲಾ ಬಾಲಕಿ ಮನೆಗೆ ಭೇಟಿ ನೀಡಿ ತುರುವೇಕೆರೆ ತಹಶಿಲ್ದಾರ್ ಪರಿಶೀಲನೆ ನಡೆಸಿದರು.
ಕಳೆದ ತಿಂಗಳ 29 ರಂದು, ಮನೆ ಕಟ್ಟಲು ನಿವೇಶನ ನೀಡುವಂತೆ ರಾಷ್ಟ್ರಪತಿಗಳಿಗೆ ಶಾಲಾ ಬಾಲಕಿ ಲಕ್ಷ್ಮೀ ಪತ್ರ ಬರೆದು ಮನವಿ ಮಾಡಿದ್ದಳು. ತುಮಕೂರು ಜಿಲ್ಲೆ, ತುರುವೇಕೆರೆ ತಾಲೂಕಿನ ತೂಯಲಹಳ್ಳಿ ಗ್ರಾಮದ ವಾಸಿಯಾಗಿರುವ ಲಕ್ಷ್ಮೀ ತೂಯಲಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾಳೆ.
ಬಾಲಕಿ ಮನೆಗೆ ಭೇಟಿ ನೀಡಿದ್ದ ತಹಶಿಲ್ದಾರ್, ಹಾಗೂ ಪಿಡಿಓ ಸ್ಥಳ ಪರಿಶೀಲನೆ ನಡೆಸಿ ಮನೆ ಕಟ್ಟಲು ವ್ಯವಸ್ಥೆ ಮಾಡೋದಾಗಿ ಭರವಸೆ ನೀಡಿದ್ದಾರೆ.
ಬಾಲಕಿ ತಂದೆ ಕಟ್ಟುತ್ತಿರುವ ಮನೆ ಜಮೀನು ತಕರಾರು ಹಿನ್ನೆಲೆ, ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಗ್ರಾಮದ ಸರ್ಕಾರಿ ಗೋಮಾಳ ಜಾಗದಲ್ಲಿ ಮನೆ ನಿರ್ಮಿಸಿ ಕೊಡೋದಾಗಿ ಭರವಸೆ ನೀಡಿದ್ದಾರೆ.
ಶಾಲಾ ಬಾಲಕಿ ರಾಷ್ಟ್ರಪತಿಗಳಿಗೆ ಬರೆದ ಪತ್ರದ ಸಾರಾಂಶ:
ವಿಷಯ: ಮನೆ ನಿರ್ಮಿಸಲು ನಿವೇಶನ ಮಂಜೂರು ಮಾಡುವಂತೆ ಕೋರಿ.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ನಾನು, ಲಕ್ಷ್ಮಿ D/o ನಾಗರಾಜು ಅವರ ಪುತ್ರಿ.
7 ನೇ ತರಗತಿ GHPS ತೂಯಲಹಳ್ಳಿ ಗ್ರಾಮ ಮತ್ತು ಗುಡಿಸಲಿನಲ್ಲಿ ಉಳಿದುಕೊಂಡಿರುವ ನಾನು ನನ್ನ ತಂದೆ,ತಾಯಿ, 11 ವರ್ಷ, 9 ವರ್ಷ ಮತ್ತು 6 ವರ್ಷಗಳ ಕಿರಿಯ ಸಹೋದರಿಯರು ಕಳೆದ ಇಪ್ಪತ್ತೈದು ವರ್ಷಗಳಿಂದ ಈ ಸ್ಥಳದಲ್ಲಿ ವಾಸಿಸುತ್ತಿದ್ದು, ನಮ್ಮ ಅಜ್ಜ (ತಾಯಿಯ ತಂದೆ) ಅಲ್ಲಿಯೇ ವಾಸವಾಗಿದ್ದರು.
ಸರ್ವೆ ನಂ. 19 ತೂಯಲಹಳ್ಳಿ ಗ್ರಾಮ ಮಾಯಸಂದ್ರ ಹೋಬಳಿ, ತುರುವೇಕೆರೆ ತಾಲೂಕು, ತುಮಕೂರು ಜಿಲ್ಲೆ, ಕರ್ನಾಟಕ ರಾಜ್ಯ, ನಮ್ಮ ಪಂಚಾಯತಿಯಿಂದ ಮನೆ ಕಟ್ಟಲು 10,000/- ಮಂಜೂರಾಗಿದೆ ನಾವು ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿದ್ದೇವೆ. ಮಳೆ ಪ್ರಾರಂಭವಾದರೆ ವಾಸಿಸಲು ಆಶ್ರಯವಿಲ್ಲ ನಾವು ಆರ್ಥಿಕವಾಗಿ ಬಡವರಾಗಿದ್ದೇವೆ. ಮತ್ತು ಕೂಲಿ ಮೂಲಕ ಜೀವನ ಸಾಗಿಸುವುದು. ಈಗ ನನ್ನ ಅಜ್ಜನ ಅಣ್ಣ ಮರಿಬಸವಯ್ಯ ಎಂಬುವರು ಜಮೀನು ತನಗೆ ಸೇರಿದ್ದು ಎಂದು ಆಕ್ಷೇಪಿಸಿ ನ್ಯಾಯಾಲಯದ ನೋಟೀಸ್ ಜಾರಿ ಮಾಡಿದ್ದು, ಮನೆ ಕಟ್ಟಲು ತಕರಾರು ಮಾಡುತ್ತಿದ್ದಾರೆ. ಅವರು ನಮ್ಮ ಗ್ರಾಮದಿಂದ ಸುಮಾರು ಕಿಮೀ ದೂರದಲ್ಲಿರುವ ದೇವಲಾಪುರ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ದಯವಿಟ್ಟು ನಮಗೆ ಮನೆ ಕಟ್ಟಲು ಅನುಕೂಲ ಮಾಡಿಕೊಡಿ ಎಂದು ಪ್ರಾರ್ಥಿಸುತ್ತೇನೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EAp8zUqF6y43cTFbQE5jEU