ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಬಿದನಗೆರೆ ಸತ್ಯ ಶನೇಶ್ವರಸ್ವಾಮಿ ದೇವಾಲಯದ ಧರ್ಮದರ್ಶಿ ಧನಂಜಯ್ ಗುರೂಜಿ ಹುಲಿ ಉಗುರು ಧರಿಸಿದ್ದಾರೆ ಎಂಬ ದೂರಿನ ಮೇರೆಗೆ ಅರಣ್ಯಾಧಿಕಾರಿಗಳು ತಪಾಸಣೆ ನಡೆಸಿದ ವೇಳೆ ಯಾವುದೇ ರೀತಿಯ ಹುಲಿ ಉಗುರು ಪತ್ತೆಯಾಗಿಲ್ಲ.
ನಾಗರಾಜು ಎಂಬುವರು ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ಧನಂಜಯ ಅವರಿಗೆ ಸೇರಿಗೆ ಸ್ಥಳಗಳಲ್ಲಿ ತಪಾಸಣೆ ನಡೆಸಿ ಹುಲಿ ಉಗುರು ಧರಿಸಿದ್ದ ಬಗ್ಗೆ ಮಾಹಿತಿ ಪಡೆದುಕೊಂಡರು.
ಶನೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಅಧಿಕಾರಿಗಳು, ಧನಂಜಯ ಗುರೂಜಿ ಅವರ ಬಳಿ ಇರುವ ಒಡವೆಗಳನ್ನು ಪರಿಶೀಲಿಸಿದರು. ಯಾವುದೇ ಹುಲಿ ಉಗುರಿನ ಪೆಂಡೆಂಟ್ ಸಿಗಲಿಲ್ಲ.
ಈ ಕುರಿತಂತೆ ಸ್ಪಷ್ಟನೆ ನೀಡಿರುವ ಧನಂಜಯ್ ಗುರೂಜಿ, ನನಗೆ ಈ ಹಿಂದೆ 2019 ರಲ್ಲಿ ಕ್ಷೇತ್ರದಲ್ಲಿ ನಡೆದ ಜಾತ್ರಾ ಮಹೋತ್ಸವದ ವೇಳೆ ಅಪರಿಚಿತರೊಬ್ಬರು ಇದನ್ನು ನನಗೆ ಉಡುಗೊರೆಯಾಗಿ ನೀಡಿದ್ದರು. ನಂತರ ಅದನ್ನು ನಾನು ಕೆಲ ದಿನಗಳ ಕಾಲ ಧರಿಸಿದ್ದೆ ಆನಂತರ ಹುಲಿಯೂರು ಮಾದರಿಯಾಗಿರುವ ಅದು ಕಂದು ಬಣ್ಣಕ್ಕೆ ತಿರುಗಿದ ನಂತರ ಅದನ್ನು ನಾನು ಧರಿಸುವುದನ್ನು ಬಿಟ್ಟೆ ಅಲ್ಲದೆ ಅದನ್ನು ಬಿಸಾಡಿದ್ದೇನೆ. ಈ ಪ್ರಕರಣದಲ್ಲಿ ನನ್ನ ಯಾವುದೇ ತಪ್ಪು ಇಲ್ಲ ನಾನು ನಿರಪರಾಧಿಯಾಗಿದ್ದೇನೆ ಎಂದು ಹೇಳಿದ್ದಾರೆ.


