ಚಂಡೀಗಢ: ಪೇಂಟ್ ನಲ್ಲಿ ಬಳಸಲಾಗುವ ಥಿನ್ನರ್ ನೀರು ಎಂದು ಭಾವಿಸಿ ಕುಡಿದು ಮಗುವೊಂದು ಮೃತಪಟ್ಟಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ಮೃತ ಮಗುವನ್ನು ಒಂದೂವರೆ ವರ್ಷದ ಹಕ್ಷನ್ ಎಂದು ಗುರುತಿಸಲಾಗಿದೆ.
ಹರಿಯಾಣದ ಹಕ್ಷನ್ ಕುಟುಂಬ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿತ್ತು. ಮದುವೆ ನಡೆಯಲಿರುವ ಮನೆ ಆದ ಕಾರಣ ಮನೆಗೆ ಪೇಯಿಂಟ್ ಹಚ್ಚಲಾಗಿದೆ. ಈ ವೇಳೆ ಬಣ್ಣಕ್ಕೆ ಬಳಸಲಾದ ಥಿನ್ನರ್ ಅನ್ನು ಮೂಲೆಯೊಂದರಲ್ಲಿ ಇರಿಸಲಾಗಿತ್ತು.
ಮದುವೆಗೆ ಬಂದಿದ್ದ ಹಕ್ಷನ್ ಆಟವಾಡುತ್ತ ಥಿನ್ನರ್ ಇದ್ದ ಜಾಗಕ್ಕೆ ಹೋಗಿ, ಅದನ್ನು ನೀರು ಎಂದು ಭಾವಿಸಿ ಕುಡಿದಿದ್ದಾನೆ. ಬಳಿಕ ತೀವ್ರ ಹೊಟ್ಟೆ ನೋವಿನಿಂದ ಪ್ರಜ್ಞಾಹೀನನಾಗಿ ಬಿದ್ದದ್ದ ಹಕ್ಷನ್ ನನ್ನು ಪೋಷಕರು ನೋಡಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ದಾರಿ ಮಧ್ಯೆಯೇ ಹಕ್ಷನ್ ಕೊನೆಯುಸಿರೆಳೆದಿದ್ದಾನೆ. ಸಿಆರ್‌ಪಿಸಿ 174 ಅಡಿಯಲ್ಲಿ ವರದಿಯನ್ನು ದಾಖಲಿಸಲಾಗುದ್ದು, ಕ್ರಮ ಕೈಗೊಂಡಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


