ಆಗ್ರಾ: ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ತಾಜ್ ಮಹಲ್ ನ ಗೋಡೆಗಳು ಹಾಗೂ ನೆಲ ಹಲವೆಡೆ ಬಿರುಕು ಬಿಟ್ಟಿದೆಯಂತೆ. ಆಗ್ರಾದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಆಗುತ್ತಿರುವ ಹಿನ್ನೆಲೆ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗಿದೆ.
ತಾಜ್ ಮಹಲ್‌ನ ಮುಖ್ಯ ಗುಮ್ಮಟದ ಸುತ್ತ ಇರುವ ಬಾಗಿಲುಗಳ ಮೇಲೆ ಅರೇಬಿಕ್ ಭಾಷೆಯಲ್ಲಿ ಕುರಾನ್ ನ ಸಾಲುಗಳನ್ನ ಬರೆಯಲಾಗಿದೆ. ಈ ಸಾಲುಗಳು ಅಳಿಸಿ ಹೋಗುತ್ತಿವೆ ಎಂದು ಕುರಿತಾಗಿ ಭಾರತೀಯ ಟೂರಿಸ್ಟ್ ಗೈಡ್ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶಕೀಲ್ ಚೌಹಾಣ್ ತಿಳಿಸಿದ್ದಾರೆ.
ಗೋಡೆಗಳಿಗೆ ಅಳವಡಿಕೆ ಮಾಡಲಾಗಿದ್ದ ಅಮೂಲ್ಯ ಶಿಲೆಗಳೂ ಕೂಡಾ ಸವೆಯುತ್ತಿವೆ. ನೆಲ ಹಾಸಿನಲ್ಲಿ ಇದ್ದ ಕಲ್ಲುಗಳೂ ಕಿತ್ತು ಹೋಗುತ್ತಿವೆ. ಗುಮ್ಮಟಗಳು, ಗೋಡೆಗಳು, ವಸ್ತು ಸಂಗ್ರಹಾಲಯದ ನೆಲ ಹಾಸುಗಳು ಬಿರುಕು ಬಿಟ್ಟಿದೆ ಎಂದು ಅವರು ಹೇಳಿದ್ದಾರೆ.
ಭಾರತೀಯ ಪುರಾತತ್ವ ಇಲಾಖೆ ಮಾತ್ರ ಈ ಕಟ್ಟಡಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳುತ್ತಿದೆ. ಇದು ತಪ್ಪು ಎಂದು ಟೂರಿಸ್ಟ್ ಗೈಡ್‌ಗಳ ಶ್ರೇಯೋಭಿವೃದ್ದಿ ಒಕ್ಕೂಟದ ಅಧ್ಯಕ್ಷ ದೀಪಕ್ ದಾನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರದ ಅತಿ ದೊಡ್ಡ ಪ್ರವಾಸಿ ತಾಣವಾದ ತಾಜ್ ಮಹಲ್‌ನ ಅಭಿವೃದ್ದಿಗೆ ಹಾಗೂ ಹಾನಿ ಸರಿಪಡಿಸುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q