ಗದಗ: ಕಾಂಗ್ರೆಸ್ ಮುಖಂಡರಾಗಿರುವ ಜನಪ್ರಿಯ ವೈದ್ಯ ಶಶಿಧರ್ ಹಟ್ಟಿ ಮನೆಯಲ್ಲಿ ಲುಂಗಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು, ಅವರು ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಕಾಂಗ್ರೆಸ್ ನಾಯಕರೊಬ್ಬರ ಹೆಸರು ಇರುವುದು ವಿಶೇಷವಾಗಿದೆ. ತನ್ನ ಆತ್ಮಹತ್ಯೆಗೆ ಮರಳು ದಂಧೆಕೋರ, ಕಾಂಗ್ರೆಸ್ ಮುಖಂಡ ಶರಣಗೌಡ ಪಾಟೀಲ್ ಕಾರಣ ಎಂದು ಶಶಿಧರ ಹಟ್ಟಿ ಬರೆದಿಟ್ಟಿದ್ದಾರೆ.
“ನಿಜವೆಂದರೆ ಶಶಿಧರ ಹಟ್ಟಿ, ಶರಣಗೌಡ ಪಾಟೀಲ್ ಸೇರಿದಂತೆ ಮೂವರು ಮರಳು ದಂಧೆಯಲ್ಲಿ ಭಾಗಿದಾರರು. ಆದರೆ, ಶಶಿಧರ ಹಟ್ಟಿ ಅವರು ಎಲ್ಲಾ ಲೆಕ್ಕವನ್ನು ಸರಿಯಾಗಿ ಕೊಟ್ಟರೂ ಪದೇಪದೆ ಶರಣಗೌಡ ಕಿರುಕುಳ ನೀಡುತ್ತಿದ್ದರು. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ” ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ತನ್ನ ಆತ್ಮಹತ್ಯೆಗೆ ಕಾರಣವಾಗಿರುವ ಶರಣ ಗೌಡ ಅವರಿಗೆ ಶಿಕ್ಷೆ ಕೊಡಿಸಬೇಕು, ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ್ ರಿಗೆ ಈ ವಿಷಯ ತಿಳಿಸಿ ಎಂದು ಮನವಿ ಮಾಡಲಾಗಿದೆ. ಸೋಮವಾರ ರಾತ್ರಿ ಆತ್ಮಹತ್ಯೆ ಘಟನೆ ನಡೆದಿದೆ. ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


