ಉಳ್ಳಾಲ: ಕೇರಳ ಕುಂಬಳೆ ಬಳಿಯ ಬಂಬ್ರಾಣ ಕಲ್ಕುಲ ನಿವಾಸಿ ಕಲ್ಲಿನ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಲೋಕೇಶ್ (52) ಎಂಬವರ ಮೃತದೇಹ ಸೋಮವಾರ ಬೆಳಗ್ಗೆ ಉಳ್ಳಾಲ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ. ಪುತ್ರನ ಆತ್ಮಹತ್ಯೆ ನಡೆದ 32 ದಿನಗಳ ಅಂತರದಲ್ಲಿ ತಂದೆಯೂ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ.
ಪುತ್ರ ರಾಜೇಶ್ (26) ಕಳೆದ ಜು.10 ರಂದು ನಾಪತ್ತೆಯಾಗಿದ್ದು, ಬಳಿಕ ರಾಜೇಶ್ ನ ಮೃತದೇಹ 12 ರಂದು ಬೆಳಗ್ಗೆ ಮಂಗಳೂರು ಬೆಂಗರೆ ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿತ್ತು. ಮಗನ ಅಂತ್ಯಕ್ರಿಯೆ ಕಳೆದ ಬಳಿಕ ತಂದೆ ಲೋಕೇಶ್ ನೊಂದು ಕೊಂಡಿದ್ದರು. ಅಲ್ಲದೆ ಮಗನ ಸಾವಿನ ಬಳಿಕ ಮಾನಸಿಕವಾಗಿ, ಕುಗ್ಗಿ ಹೋಗಿದ್ದರು.
ಆ.13 ರಂದು ಬೆಳಗ್ಗೆ 9 ಗಂಟೆಯ ವೇಳೆ ಪರಿಸರದ ಕೆಲವು ಮಂದಿಗೆ ಲೋಕೇಶ್ ರವರು ಮೊಬೈಲ್ ಮೂಲಕ ವಾಟ್ಸಾಪ್ ಸಂದೇಶ ಕಳುಹಿಸಿ ನಾನು ಈಗ ಸೋಮೇಶ್ವರಕ್ಕೆ ಹೋಗಿ ಸಮುದ್ರಕ್ಕೆ ಹಾರುತ್ತೇನೆ. ನನ್ನ ಹೆಣ ಉಳ್ಳಾಲದಲ್ಲಿ ಸಿಗಬಹುದು ನಾನು ಮೊಬೈಲ್ ಕೊಂಡು ಹೋಗುವುದಿಲ್ಲ ಮನೆಯಲ್ಲಿ ಇಟ್ಟು ಹೋಗ್ತೇನೆ ಎಂದು ಹೇಳಿ ಮನೆಯಿಂದ ತೆರಳಿದ್ದರು.
ವಾಟ್ಸಾಪ್ ಸಂದೇಶ ಕೇಳಿದ ಕೂಡಲೇ ಪರಿಸರದವರು ಕರೆ ಮಾಡಿದಾಗ ಮನೆ ಮಂದಿ ಕಾಲ್ ರಿಸೀವ್ ಮಾಡಿದ್ದರು. ಆಗ ಮನೆ ಮಂದಿ ಲೋಕೇಶ್ ರವರು ಮೊಬೈಲ್ ಮನೆಯಲ್ಲಿ ಇಟ್ಟು ಹೊರ ಹೋದ ಬಗ್ಗೆ ಮಾಹಿತಿ ನೀಡಿದ್ದರು. ಕೂಡಲೇ ಈ ವಿಷಯವನ್ನು ಉಳ್ಳಾಲ ಠಾಣೆಗೆ ಮನೆಯವರು ಹಾಗೂ ಪರಿಸರ ನಿವಾಸಿಗಳು ತಿಳಿಸಿದ್ದರು.
ನಿನ್ನೆ 11 ಗಂಟೆ ವೇಳೆ ಲೋಕೇಶ್ ರ ಮೃತದೇಹ ಉಳ್ಳಾಲದಲ್ಲಿ ಮೀನುಗಾರರಿಗೆ ಸಿಕ್ಕಿದೆ. ಬಳಿಕ ಮೃತದೇಹವನ್ನು ಉಳ್ಳಾಲ ಪೊಲೀಸರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಮರಣೋತ್ತರ ಪರೀಕ್ಷೆ ನಡೆಸಿ, ಇಂದು ಬೆಳಗ್ಗೆ ಮನೆಯವರಿಗೆ ಬಿಟ್ಟು ಕೊಟ್ಟರು. ರಾಜೇಶ್ ರವರ ಸಾವಿನ ಬಳಿಕ ಕೇವಲ 33 ದಿನದಲ್ಲಿ ತಂದೆ ಲೋಕೇಶ್ ರ ಸಾವು ಇದೀಗ ಮನೆಯವರಿಗೆ ಹಾಗೂ ಪರಿಸರ ಪ್ರದೇಶದಲ್ಲಿ ಶೋಕಸಾಗರವನ್ನುಂಟುಮಾಡಿದೆ. ಪ್ರಕರಣ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8123382149 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


