ತುಮಕೂರು: ಬಡ್ಡಿ ಹಣ ನೀಡುವ ವಿಚಾರಕ್ಕೆ ಶುರುವಾದ ಗಲಾಟೆಯು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಮೃತ್ತೂರು ಗ್ರಾಮದಲ್ಲಿ ನಡೆದಿದೆ.
ಅಮೃತ್ತೂರು ಗ್ರಾಮದ ಅಬ್ದುಲ್ ಖಲೀಲ್ (55) ಮೃತ ದುರ್ದೈವಿಯಾಗಿದ್ದಾನೆ. ಅಬ್ದುಲ್ ಖಲೀಲ್ ಮಗಳ ಮದುವೆಗಾಗಿ ಅದೇ ಗ್ರಾಮದ ಕೋಳಿ ಅಂಗಡಿ ವ್ಯಾಪಾರಿ ತೌಸೀಪ್ ಪಾಷ ಎಂಬಾತನಿಂದ 50,000 ರೂ. ಸಾಲ ಪಡೆದಿದ್ದರು. 50,000 ರೂ. ಸಾಲಕ್ಕೆ ಅಬ್ದುಲ್ ಖಲೀಲ್ ಪ್ರತಿ ತಿಂಗಳು 5 ಸಾವಿರ ಬಡ್ಡಿ ಕಟ್ಟುತ್ತಿದ್ದರು. ಆದರೆ ಈ ತಿಂಗಳು ಬಡ್ಡಿ ಹಣ ನೀಡಲು ತಡವಾಗಿದ್ದಕ್ಕೆ ಅಬ್ದುಲ್ ಖಲೀಲ್ ಹಾಗೂ ತೌಸೀಪ್ ಷಾಷ ನಡುವೆ ಗಲಾಟೆ ನಡೆದಿದೆ.
ಗಲಾಟೆ ವಿಕೋಪಕ್ಕೆ ತಿರುಗಿದ್ದು ತೌಸಿಪ್ ಪಾಷಾ ಕುಟುಂಬಸ್ಥರು ಅಬ್ದುಲ್ ಖಲೀಲ್ ಮೇಲೆ ಹಲ್ಲೆ ಮಾಡಿದ್ದಾರೆ. ಕೋಳಿ ಕತ್ತರಿಸುವ ಮಚ್ಚಿನಿಂದಲೇ ಹಲ್ಲೆ ನಡೆಸಿದ್ದಾರೆ ಎಂದು ಅಬ್ದುಲ್ ಖಲೀಲ್ ಕುಟುಂಬಸ್ಥರು ಆರೋಪಿಸಿದ್ದಾರೆ. ಗಲಾಟೆಯಲ್ಲಿ ತೀವ್ರ ಗಾಯಗೊಂಡಿದ್ದ ಅಬ್ದುಲ್ ಖಲೀಲ್ ನನ್ನು ಕೂಡಲೇ ಬೆಂಗಳೂರಿನ ನಿಮಾನ್ಸ್ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ಬೆಳಗ್ಗೆ ಅಬ್ದುಲ್ ಖಲೀಲ್ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಅಮೃತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


