ಪಂಜಾಬ್: ರೆಸ್ಟಾರೆಂಟ್ ಮಾಲೀಕನೊಂದಿಗೆ ಬಿಲ್ ಪಾವತಿಗೆ ಸಂಬಂಧಿಸಿದಂತೆ ನಡೆದ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ಪೊಲೀಸ್ ಸಿಬ್ಬಂದಿಯನ್ನು ನಾಲ್ವರು ಕಬಡ್ಡಿ ಆಟಗಾರರು ಥಳಿಸಿ ಸಾಯಿಸಿದ್ದಾರೆ.
ಆರೋಪಿಗಳು ಸಮೀಪದ ರೈಸರ್ ಗ್ರಾಮದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಊಟಕ್ಕೆಂದು ರೆಸ್ಟೋರೆಂಟ್ ಗೆ ಬಂದಿದ್ದರು. ಬಿಲ್ ಪಾವತಿಸುವಾಗ ವಾಗ್ವಾದ ಆರಂಭವಾಗಿದ್ದು, ಆರೋಪಿಗಳು ದರೋಡೆ ಪ್ರಯತ್ನಿಸಿದ್ದಾರೆಂದು ರೆಸ್ಟಾರೆಂಟ್ ಮಾಲೀಕ ಪೊಲೀಸರನ್ನು ಕರೆದಿದ್ದಾರೆ.
ಈ ವೇಳೆ, ಹೆಡ್ ಕಾನ್ ಸ್ಟೇಬಲ್ ದರ್ಶನ್ ಸಿಂಗ್ ಪೊಲೀಸ್ ತಂಡದೊಂದಿಗೆ ಆಗಮಿಸಿ, ಆರೋಪಿಗಳನ್ನು ಠಾಣೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಗಲಾಟೆಯಲ್ಲಿ ದರ್ಶನ್ ಸಿಂಗ್ ಕೆಳಗೆ ಬಿದ್ದಿದ್ದು, ಅವರ ತಲೆಗೆ ಬಲವಾದ ಏಟಾಗಿದೆ. ಅವರನ್ನು ಬರ್ನಾಲಾ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ವಿವರ ತಿಳಿದ ಆರೋಪಿಗಳು ಪರಾರಿಯಾಗಿದ್ದಾರೆ.
ಕರ್ತವ್ಯದ ವೇಳೆ ಸಾವನ್ನಪ್ಪಿದ ಪೊಲೀಸ್ ಸಿಬ್ಬಂದಿ ಕುಟುಂಬಕ್ಕೆ 1 ಕೋಟಿ ರೂಪಾಯಿಗಳ ಪರಿಹಾರವನ್ನು ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದ್ದು, ಪೊಲೀಸ್ ಕಲ್ಯಾಣ ವಿಮೆ ಅಡಿಯಲ್ಲ ಇನ್ನೂ 1 ಕೋಟಿ ರೂಪಾಯಿಯನ್ನು ಎಚ್ ಡಿಎಫ್ ಸಿ ಬ್ಯಾಂಕ್ ನೀಡಲಿದೆ.


