ಚಿಕ್ಕಮಗಳೂರು: ಹಣದ ಆಸೆಗಾಗಿ ಸ್ವಂತ ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ತಳ್ಳಿದ ಅಮಾನವೀಯ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯ ತಂದೆ ಸೇರಿದಂತೆ ಒಟ್ಟು 12 ಮಂದಿ ಆರೋಪಿಗಳನ್ನು ಬೀರೂರು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ವಿವರ: ಅಜ್ಜಂಪುರ ತಾಲೂಕಿನ ನಾಗವಂಗಲ ಗ್ರಾಮದ ನಿವಾಸಿಯಾಗಿರುವ ಆರೋಪಿ ತಂದೆ ತನ್ನ 16 ವರ್ಷದ ಮಗಳನ್ನು ವೇಶ್ಯಾವಾಟಿಕೆಗೆ ತಳ್ಳಿದ ಆರೋಪಿಯಾಗಿದ್ದಾನೆ. ಆರು ವರ್ಷಗಳ ಹಿಂದೆ ಆತನ ಪತ್ನಿ ಮೃತಪಟ್ಟ ನಂತರ ಸಂತ್ರಸ್ತ ಬಾಲಕಿ ಅಜ್ಜ–ಅಜ್ಜಿಯ ಮನೆಯಲ್ಲಿ ವಾಸವಿದ್ದಳು. ಆದರೆ ಇತ್ತೀಚೆಗೆ ತಂದೆ ಗಿರೀಶ್ ಹಾಗೂ ಅಜ್ಜಿ ನಾಗರತ್ನ ಸೇರಿ ಬ್ರೋಕರ್ ನಾರಾಯಣಸ್ವಾಮಿ ಎಂಬಾತನ ಮೂಲಕ ಬಾಲಕಿಯನ್ನು ಮಂಗಳೂರಿನ ಭರತ್ ಶೆಟ್ಟಿ ಎಂಬಾತನ ಮನೆಗೆ ಕರೆದೊಯ್ದಿದ್ದರು.
ಮಂಗಳೂರಿನಲ್ಲಿ ಬಾಲಕಿಯ ಮೇಲೆ ಸತತವಾಗಿ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು. ಬಾಲಕಿ ಪ್ರತಿರೋಧ ತೋರಿದಾಗ, “ನಿನ್ನ ತಂದೆಗೆ ಹಣ ನೀಡಿದ್ದೇವೆ” ಎಂದು ಆರೋಪಿಗಳು ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ಬಾಲಕಿ ತನ್ನ ಚಿಕ್ಕಪ್ಪನಿಗೆ ಮಾಹಿತಿ ನೀಡಿದ ನಂತರ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಬಾಲಕಿಯ ಚಿಕ್ಕಪ್ಪ ನೀಡಿದ ದೂರಿನ ಮೇರೆಗೆ ಬೀರೂರು ಠಾಣೆ ಪೊಲೀಸರು ತನಿಖೆ ಕೈಗೊಂಡು, ಆರೋಪಿಗಳಾದ ಗಿರೀಶ್, ನಾಗರತ್ನ, ನಾರಾಯಣಸ್ವಾಮಿ, ಭರತ್ ಶೆಟ್ಟಿ, ಮನೆ ಮಾಲೀಕ ಶೇಖರ್ ಸುವರ್ಣ ಹಾಗೂ ದೌರ್ಜನ್ಯ ಎಸಗಿದ ಜೇನೇಂದ್ರ, ರಾಜೇಂದ್ರ, ಸಿರಾಜ್ ಸೇರಿದಂತೆ ಹಲವರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


