ವಾರಣಾಸಿ: ಉತ್ತರ ಪ್ರದೇಶ ಜಿಲ್ಲೆಯ ವಾರಣಾಸಿ-ಲಖನೌ ಹೆದ್ದಾರಿಯಲ್ಲಿ ಬುಧವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಒಂಬತ್ತು ವರ್ಷದ ಬಾಲಕ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಟ್ಯಾಕ್ಸಿಯು ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅವರು ಪಿಲಿಭಿತ್ ಜಿಲ್ಲೆಯವರಾಗಿದ್ದು, ಬಾಡಿಗೆ ಟ್ಯಾಕ್ಸಿಯಲ್ಲಿ ವಾರಣಾಸಿಗೆ ಬಂದಿದ್ದರು.
ಮಹೇಂದ್ರ ಪಾಲ್ ಮತ್ತು ಅವರ ಸಂಬಂಧಿಕರು ವಾರಣಾಸಿಗೆ ಕುಟುಂಬದ ಸದಸ್ಯರ ಚಿತಾಭಸ್ಮವನ್ನು ಗಂಗಾದಲ್ಲಿ ಮುಳುಗಿಸಲು ಬಂದಿದ್ದರೆ, ಇತರರು ದೇವಾಲಯಗಳಲ್ಲಿ ಪೂಜೆ ಸಲ್ಲಿಸಲು ಬಂದಿದ್ದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೋಲೀಸ್ ಮೂಲವು ತಿಳಿಸಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಪಘಾತದಲ್ಲಿ ಆದ ಜೀವಹಾನಿಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದು, ಬಾಲಕನಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.


