ತಿಪಟೂರು : ಅಭಿವೃದ್ಧಿಯಲ್ಲಿ ಶೂನ್ಯ. ಕಳೆದ ಚುನಾವಣೆಯಲ್ಲಿ ಜನರಿಗೆ ಅನೇಕ ಸುಳ್ಳು ಭರವಸೆ ನೀಡಿ ಶಾಸಕರನ್ನು ಹೈಜಾಕ್ ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಸದಾ ವಿವಾದಗಳನ್ನು ಸೃಷ್ಠಿಸುತ್ತಾ ಜನರ ಮನಸ್ಸಿಗೆ ಘಾಸಿ ಮಾಡಿ ಸದಾ ಒಂದು ಸಮುದಾಯದ ಹಿತ ಕಾಪಾಡುತ್ತಾ ಎಲ್ಲಾ ವರ್ಗದವರ ದಾರಿತಪ್ಪಿಸುತ್ತಿದೆ. ಇದೀಗ ರಾಜ್ಯ ಸರ್ಕಾರ ಪಠ್ಯ ಪರಿಷ್ಕರಣೆ ಹೆಸರಲ್ಲಿ ತಮ್ಮ ಕೋಮುವಾದ ಬಿಂಬಿಸುತ್ತಿದೆ ಎಂದು ತಿಪಟೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಷಡಕ್ಷರಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ನನ್ನ ರಾಜಕೀಯ ಜೀವನದಲ್ಲಿ ಇಂತಹ ದುಸ್ಥಿತಿ ಎಂದೂ ಕಂಡಿಲ್ಲಾ. ಹಿಂದೆ ತಾವು ಬರೆದ ಲೇಖನ ಪಠ್ಯದಲ್ಲಿ ಬಂದರೇ ಹೆಮ್ಮೆಪಡುತ್ತಿದ್ದರು. ಆದರೆ ಈಗ ಪಠ್ಯ ಭಾಗಗಳಿಗೆ ಲೇಖಕರು ಬರೆದ ಪಾಠಗಳನ್ನು ದಯಮಾಡಿ ಸೇರಿಸಬೇಡಿ ಎಂದು ಲೇಖಕರೇ ಪತ್ರ ಬರೆಯುತ್ತಿರುವುದು ದುಸ್ಥಿತಿಯಾಗಿದೆ ಎಂದು ಅವರು ಹೇಳಿದರು.
ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ ಜ್ಞಾನಜ್ಯೊತಿ ಬಸವಣ್ಣ ಧರ್ಮವನ್ನು ಸುಧಾರಿಸಿದರು ಎಂದು ಸೇರಿಸುವ ಮಟ್ಟಕ್ಕೆ ಇಳಿದಿದ್ದಾರೆಂದರೇ ಜನ ಯೋಚಿಸಬೇಕು. ಮಾನವ ಧರ್ಮದ ಪ್ರತೀಕವಾದ ಕುವೆಂಪು ಮಾತುಗಳನ್ನು ತಿರಚಲಾಗುತ್ತಿದೆ. ಇದಕ್ಕೆಲ್ಲಾ ಕಾರಣ ದುರಹಂಕಾರಿ ಬಿಜೆಪಿ ಸರ್ಕಾರ. ಕೇವಲ ಒಂದು ಸಮುದಾಯ ಸದಾ ಮೇಲ್ಪಂಕ್ತಿಯಲ್ಲಿರಬೇಕು ಎಂದು ಲಿಂಗಾಯತ ಧರ್ಮ ಸೇರಿದಂತೆ ಎಲ್ಲಾ ಧರ್ಮಗಳನ್ನು ಕೆಳ ಮಟ್ಟಕ್ಕೆ ಇಳಿಸುತ್ತಿರುವುದು ಶೋಚನೀಯ ಸ್ಥಿತಿಯಾಗಿದೆ ಎಂದು ಅವರು ಟೀಕಿಸಿದರು.
ಅಲ್ಪಸಂಖ್ಯಾತರ ಮೇಲೆ ಸದಾ ದೌರ್ಜನ್ಯ ಮಾಡುತ್ತಾ, ದಲಿತ ವರ್ಗದವರನ್ನು ಸದಾ ದೂರವಿಡುತ್ತಾ ಸಮಾಜದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಇತಿಹಾಸವನ್ನೇ ತಿರುಚುವ ಕೆಲಸ ಮಾಡುತ್ತಿದ್ದಾರೆ. ಜಗದ್ಗುರುಗಳ ಹಾಗೂ ಮಠಾಧಿಪತಿಗಳ ಮಾತುಗಳಿಗೆ ಗೌರವ ಕೊಡದ ರೀತಿ ವರ್ತಿಸುತ್ತಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನಕ್ಕೆ ಅಗೌರವ ನೀಡುತ್ತಿದ್ದಾರೆ. ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಮಾರ್ಮಿಕವಾಗಿ ಹೇಳಿಕೆ ನೀಡುವ ಕೊಬ್ಬು ಬಂದಿದೆ. ಪ್ರಜಾಪ್ರಭುತ್ವ ತುಳಿದು, ಏಕ ಚಕ್ರಾಧಿಪತಿಗಳಂತೆ ವರ್ತಿಸುತ್ತಿದ್ದಾರೆ. ಅಧಿಕಾರ ಶಾಶ್ವತವಲ್ಲಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರದಿ: ಆನಂದ, ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5