ಶಿವಮೊಗ್ಗ: ಬೀದಿ ನಾಯಿಯನ್ನು ಕೊಂದು ಆಟೋ ಹಿಂದೆ ಕಟ್ಟಿ ಎಳೆದೊಯ್ದ ಆಟೋ ಚಾಲಕನೊಬ್ಬನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
ವಾಜೀದ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಹೊಸನಗರ ತಾಲೂಕಿನ ರಿಪ್ಪನ್ಪೇಟೆಯ ಕೆಂಚನಾಳ ಗ್ರಾಮದಲ್ಲಿ ಜ.16ರಂದು ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತನ್ನ ಪಾಡಿಗೆ ಮಲಗಿದ್ದ ನಾಯಿಯ ತಲೆ ಮೇಲೆ ಪದೇ ಪದೇ ಕಲ್ಲು ಎತ್ತಿ ಹಾಕಿ ಅರೆ ಜೀವ ಮಾಡಿ ಬಳಿಕ ಆಟೋಕ್ಕೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದು ಕೊಂದಿರುವ ಆರೋಪ ಕೇಳಿ ಬಂದಿದೆ. ಈ ಘಟನೆಯನ್ನು ಯುವಕನೊಬ್ಬ ವಿಡಿಯೋ ಮಾಡಿಕೊಂಡು ಪ್ರಾಣಿ ದಯಾ ಸಂಘದ ರಾಷ್ಟ್ರೀಯ ಕಾರ್ಯಕರ್ತೆ ಮನೇಕಾ ಗಾಂಧಿ ಹಾಗೂ ಪ್ರಾಣಿ ದಯಾ ಸಂಘದವರ ಮೇಲ್ ಐಡಿಗೆ ಯುವಕನ ಮೊಬೈಲ್ನಿಂದಲೇ ಸಂದೇಶ ಕಳುಹಿಸಿದ್ದಾರೆ.
ಕೇವಲ 45 ನಿಮಿಷಗಳಲ್ಲೇ ಸ್ಪಂದಿಸಿದ ಮಾಜಿ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರು ಯುವಕನಿಗೆ ಕೂಡಲೇ ಸ್ಥಳೀಯ ಠಾಣೆಗೆ ತೆರಳಿ ದೂರು ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಹಾಗೂ ರಿಪ್ಪನ್ಪೇಟೆ ಪಿಎಸ್ಐ ಪ್ರವೀಣ್ ಅವರಿಗೆ ಮಾಹಿತಿ ನೀಡಿದ್ದಾರೆ. ಮನೇಕಾ ಗಾಂಧಿ ಅವರ ಕರೆ ಬರುತಿದ್ದಂತೆ ಎಚ್ಚೆತ್ತುಕೊಂಡ ರಾಜ್ಯ ಪ್ರಾಣಿ ದಯಾ ಸಂಘದವರು ಈ ಬಗ್ಗೆ ಪಶು ವೈದ್ಯಾಧಿಕಾರಿ ಕಡೆಯಿಂದ ಪಟ್ಟಣದ ಠಾಣೆಗೆ ದೂರು ದಾಖಲಿಸಿದ್ದಾರೆ. ದೂರು ಸಲ್ಲಿಕೆಯಾದ ಕೇವಲ 15 ನಿಮಿಷಗಳಲ್ಲಿ ಆರೋಪಿ ಆಟೋ ಚಾಲಕ ವಾಜೀದ್ನನ್ನು ಪಿಎಸ್ ಐ ಪ್ರವೀಣ್ ನೇತೃತ್ವದ ಸಿಬ್ಬಂದಿಗಳು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ತನ್ನ ಕೋಳಿಗಳನ್ನು ನಾಯಿ ಹಿಡಿದು ತಿನ್ನುತ್ತಿತ್ತು. ಹೀಗಾಗಿ ಕೋಪಗೊಂಡು ನಾಯಿಯನ್ನು ಕೊಂದಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx