ಬೆಂಗಳೂರು: ಕೆಆರ್ ಮಾರ್ಕೆಟ್ ಬಳಿ ಬೆಳಗಿನ ಜಾವ ಆಟೋಗಾಗಿ ಕಾಯುತ್ತಿದ್ದ ಅಪರಿಚಿತ ಮಹಿಳೆಯನ್ನು ಚಾಲಕನೊಬ್ಬ ತನ್ನ ಆಟೋದಲ್ಲಿ ಹತ್ತಿಸಿಕೊಂಡು ಹೋಗಿ, ಆಕೆಯನ್ನು ಪಾಳು ಬಿದ್ದ ಕಟ್ಟಡಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ಬಳಿಕ ಅದೇ ಕಟ್ಟಡದಿಂದ ದೂಡಿ ಹತ್ಯೆ ಮಾಡಿದ್ದಾನೆ. ಆರೋಪಿಯನ್ನು ಮುಬಾರಕ್ (38) ಎಂದು ಗುರುತಿಸಲಾಗಿದೆ.
ಅದೇ ದಿನ ಪೊಲೀಸರು ಸಂಪಂಗಿ ರಾಮನಗರದ ಜನತಾ ಸಹಕಾರಿ ಕಟ್ಟಡದ ಬಳಿಯ ಪಾಳು ಬಿದ್ದ ಕಟ್ಟಡದಲ್ಲಿ ಮಹಿಳೆಯ ಮೃತದೇಹವನ್ನು ಪತ್ತೆ ಮಾಡಿದ್ದರು. ಪ್ರಾಥಮಿಕ ತನಿಖೆಯಲ್ಲಿ ಮಹಿಳೆ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಶಂಕಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಸಾವಿಗೂ ಮೊದಲು ಅತ್ಯಾಚಾರ ನಡೆದಿರುವುದು ತಿಳಿದುಬಂದಿದೆ.
ಈ ಬಗ್ಗೆ ಪೊಲೀಸರು ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಬಳಿಕ ಕಟ್ಟಡದಿಂದ ತಳ್ಳಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ ಈ ವರೆಗೂ ಮೃತ ಮಹಿಳೆಯ ಹಿನ್ನೆಲೆ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


