ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದಿನಿಂದ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ ಸುಮಲತಾ ಅಂಬರೀಷ್ ಪರ ಪ್ರಚಾರ ಮಾಡಿ ಗೆಲುವಿಗೆ ಕಾರಣವಾಗಿದ್ದ ನಟ ದರ್ಶನ್ ತಾನೆಂದಿಗೂ ಸುಮಲತಾ ಪರ ಎಂದಿದ್ದರು. ಅವರ ಪ್ರತಿಯೊಂದು ನಡೆಯನ್ನೂ ಬೆಂಬಲಿಸಿತ್ತು ಬೆಂಗಾವಲಾಗಿ ನಿಂತಿದ್ದರು. ಅವರು ಇತ್ತೀಚೆಗೆ ಬಿಜೆಪಿ ಸೇರಿದಾಗಲು ಅವರ ನಿರ್ಧಾರವೇ ನನ್ನ ನಿರ್ಧಾರ ಎಂದಿದ್ದರು. ಹೀಗಾಗಿ ಮಂಡ್ಯ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಪರ ದರ್ಶನ್ ಪ್ರಚಾರಕ್ಕೆ ಬರುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಅಚ್ಚರಿ ಎಂಬಂತೆ ಅವರು ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರವಾಗಿ ಪ್ರಚಾರ ನಡೆಸಲಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಸುಮಲತಾ ಹಾಗೂ ಅವರ ಆಪ್ತ ಇಂಡವಾಳು ಸಚ್ಚಿದಾನಂದ ಬಿಜೆಪಿಯಲ್ಲಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ್ ಪ್ರಚಾರ ನಡೆಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಒಟ್ಟಿನಲ್ಲಿ ಇದು ಸುಮಲತಾ ಅಂಬರೀಷ್ ಗೆ ತಿಳಿದು ಮಾಡುತ್ತಿರುವ ಕೆಲಸವೋ ಎಂದು ಇನ್ನಷ್ಟೇ ತಿಳಿಯಬೇಕಿದೆ.
ಅಂದಹಾಗೆ, ಇಂದಿನಿಂದ ಪ್ರಚಾರ ಆರಂಭಿಸಲಿರುವ ದರ್ಶನ್ ಬೆಳಗ್ಗೆ 9-30 ಗಂಟೆಗೆ ಹಲಗೂರಿನಿಂದ ಸ್ಟಾರ್ ಚಂದ್ರು ಹಾಗೂ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಅವರ ಜೊತೆಗೂಡಿ ಹುಸ್ಕೂರು, ಹಾಡ್ಲಿ ಸರ್ಕಲ್, ಮಳವಳ್ಳಿ, ಬೆಳಕವಾಡಿ, ಬೊಪ್ಪೇಗೌಡನಪುರ, ಸರಗೂರು ಹ್ಯಾಂಡ್ ಪೋಸ್ಟ್, ಪೂರಿಗಾಲಿ, ಟಿ. ಕಾಗೇಪುರ (ತಳಗವಾದಿ) ಬಂಡೂರು, ಹಿಟ್ಟನಹಳ್ಳಿ ಕೊಪ್ಪಲು, ಮಿಕ್ಕೆರೆ, ಕಿರುಗಾವಲು ಸಂತೆಮಾಳ, ಚನ್ನಪಿಳ್ಳೆಕೊಪ್ಪಲು ಗ್ರಾಮಗಳಲ್ಲಿ ಪ್ರಚಾರ ನಡೆಸಲಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


