ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ರಿಯಾಲಿಟಿ ಶೋನಲ್ಲಿ ಮಾತನಾಡಿದ ಜಗ್ಗೇಶ್, ನಾವು ಹೇಗೆ ಸಿನಿಮಾ ಮಾಡೋದು? 4-5 ವರ್ಷಗಳಿಂದ ಎಲ್ಲವೂ ಡಿಸಾಸ್ಟರ್ ಆಗಿದೆ. ಎಲ್ಲರೂ ಒಳ್ಳೆಯ ಸಿನಿಮಾಗಳನ್ನೇ ಮಾಡುತ್ತಿದ್ದಾರೆ. ಕೆಟ್ಟ ಸಿನಿಮಾಗಳನ್ನು ಯಾರೂ ಮಾಡುತ್ತಿಲ್ಲ. ಎಲ್ಲ ರೀತಿಯ ಪ್ರಚಾರಗಳನ್ನು ಸಹ ಮಾಡುತ್ತಿದ್ದಾರೆ. ಪತ್ರಿಕೆಯಲ್ಲಿ ಜಾಹಿರಾತು ನೀಡುತ್ತಿದ್ದಾರೆ. ಟಿವಿಗಳಲ್ಲಿ ಜಾಹಿರಾತು ನೀಡುತ್ತಿದ್ದಾರೆ. ಎಲ್ಲವನ್ನೂ ಮಾಡುತ್ತಾರೆ.
ಅದೇ ನಿರೀಕ್ಷೆಯಲ್ಲಿ ಥಿಯೇಟರ್‌ಗೆ ಬಂದಾಗ ಜನವೇ ಇಲ್ಲ ಅಂದಾಗ ತುಂಬಾ ಬೇಸರವಾಗುತ್ತದೆ. ಯಾಕೆ ಈ ರೀತಿ ಆಯ್ತು. ಕನ್ನಡ ಚಿತ್ರರಂಗ ಹಿಂಗೆ ಅಂದರೆ ಸತ್ಯವಾಗಿ ಅದಲ್ಲ. ಕನ್ನಡಕ್ಕೆ ಮಾತ್ರ ಹಿಂಗೆ ಅಂದ್ರೆ ಅಲ್ಲ ಎಲ್ಲರಿಗೂ ಆಗುತ್ತಿದೆ. ಚಿತ್ರರಂಗಕ್ಕೆ ಏನಾಗುತ್ತಿದೆ. ನಾವು ಹೇಗೆ ಸಿನಿಮಾ ಮಾಡುವುದು. ಯಾಕೆ ಜನ ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಮಾತು ಮುಂದುವರಿಸಿದ ಅವರು ಅಕ್ಷಯ್ ಕುಮಾರ್‌ದ ಕೋಟ್ಯಂತರ ರೂಪಾಯಿ ಹಾಕಿ ಸಿನಿಮಾ ಮಾಡಿದ್ದಾರೆ. ಆ ಸಿನಿಮಾ ಕೂಡ ಹೀನಾಯ ಸೋಲು ಕಂಡಿದೆ. ಇಡೀ ಭಾರತದಲ್ಲಿ ಸಿನಿಮಾ ವಾಷ್‌ಔಟ್ ಆಗಿದೆ. ಈಗ ಏನು ಆಗಿದೆ ಅಂದರೆ 200 ಕೋಟಿ ರೂಪಾಯಿ ಹಾಕಿ ಯಾರು ಸಿನಿಮಾ ಮಾಡ್ತಾರೋ, ಅದು ಸಿನಿಮಾ ಎನ್ನುವಂತಾಗಿದೆ.
ಯಾರು ಒಂದೊಳ್ಳೇ ಕಥೆಯನ್ನಿಟ್ಟುಕೊಂಡು, ಒಂದು ಸಣ್ಣ ಸಿನಿಮಾ ಮಾಡ್ತಾರೆ, ಅದು ಸಿನಿಮಾ ಅಲ್ಲ ಅನ್ನೋ ಹಾಗೇ ಆಗಿದೆ. ನಮ್ಮ ಅಣ್ಣ-ತಮ್ಮಂದಿರು, ಒಡಹುಟ್ಟಿದವರು ಎಲ್ಲರೂ ಪಾಪ ಸಿನಿಮಾ ಬಿಡುಗಡೆಯಾದಾಗ, ಇದೊಂದು ದರಿದ್ರ ಪಿಚ್ಚರ್, ಇದೊಂದು ಕಿತ್ತೋಗಿರುವ ಪಿಚ್ಚರ್, ಇದನ್ನು ನೋಡುವುದು ದಂಡ, ಅಂತಾ ತಮ್ಮ ಶ್ರಮವನ್ನು ಹಾಕಿ ಇನ್ನೊಬ್ಬರ ಲೈಫ್‌ನ ಹಾಳು ಮಾಡುತ್ತಾರೆ ಎಂದರು.
ಅದನ್ನು ನೋಡಿ ಬರುವಂತಹ ಜನರು ಇದ್ದಾರೆ ಈ ಕಾಲದಲ್ಲಿ. ಎಲ್ಲರೂ ಚೆನ್ನಾಗಿರಲಿ ಅಷ್ಟೇ, ನಾವು ಯಾರಿಗೂ ಕೆಟ್ಟದ್ದು ಬಯಸೋದು ಬೇಡ. ನೀವು ಬೇಜಾರಾಗಿ ನನಗೆ ಸಮಯವೇ ಹೋಗುತ್ತಿಲ್ಲ ಅಂದಾಗ ಯಾವುದೋ ಒಂದು ಯೂಟ್ಯೂಬ್‌ನಲ್ಲಿ ಒಂದು ಸೀನ್ ನೋಡಿ ಖುಷಿ ಪಡ್ತೀರಿ ಅಂದ್ರೆ, ಅದು ನಮ್ಮ ಸಿನಿಮಾ. ನಾನು ಸ್ವಲ್ಪ ಭಾವುಕನಾದೆ. ಯಾಕೆಂದರೆ, ನನ್ನ ಅಣು ರೇಣು ತೃಣಕಾಷ್ಟದಲ್ಲೂ ಸಿನಿಮಾವೇ ತುಂಬಿದೆ. ನನ್ನ ಬದುಕು, ನನ್ನ ಕನಸು, ನನ್ನ ಬಟ್ಟೆ ಎಲ್ಲವನ್ನೂ ಸಿನಿಮಾ ಕೊಟ್ಟಿದೆ. ಹಾಗಾಗಿ, ಸಿನಿಮಾವನ್ನು ನಾನು ತಾಯಿಯಂತೆ ಪ್ರೀತಿ ಮಾಡುತ್ತೇನೆ ಎಂದು ನಟ ಜಗ್ಗೇಶ್ ಕಣ್ಣೀರು ಹಾಕಿದ್ದಾರೆ.
ಕನ್ನಡ ಚಿತ್ರರಂಗ ಮಾತ್ರವಲ್ಲದೇ ಭಾರತೀಯ ಚಿತ್ರರಂಗದ ಯಾವ ಚಿತ್ರಗಳು ಕೂಡ ಕೆಲ ಸಮಯದಿಂದ ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ಸು ಕಾಣುತ್ತಿಲ್ಲ. ಅದರಲ್ಲೂ ಸ್ಯಾಂಡಲ್‌ವುಡ್ ಮಾತ್ರ ದಿನದಿಂದ ದಿನಕ್ಕೆ ಸೊರಗಿ ಹೋಗುತ್ತಿದೆ. ಜನ ಕಾತುರದಿಂದ ಕಾಯುತ್ತಿರುವ ಯಾವ ಸಿನಿಮಾಗಳು ಕೂಡ ಬಿಡುಗಡೆಯಾಗುತ್ತಿಲ್ಲ. ಬಿಡುಗಡೆಯಾದ ಹತ್ತಾರು ಚಿತ್ರಗಳನ್ನು ನೋಡಲು ಜನ ಥಿಯೇಟರ್‌ನತ್ತ ಮುಖ ಮಾಡುತ್ತಿಲ್ಲ. ಕಳೆದ ಹಲವು ತಿಂಗಳಿನಿಂದ ಇದೇ ಪರಿಸ್ಥಿತಿ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದ ಈಗಿನ ಪರಿಸ್ಥಿತಿಯನ್ನು ನೆನೆದು ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಕಣ್ಣೀರು ಹಾಕಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


