ಮುಂದಿನ ಮಾರ್ಚ್ 17ರಂದು ಸ್ಯಾಂಡಲ್‌ವುಡ್‌ನ ‘ಪವರ್ ಸ್ಟಾರ್’ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಜನ್ಮದಿನ. ಈ ಹೊಸ್ತಿಲಲ್ಲೇ ಅಭಿಮಾನಿಗಳಿಗೆ ಖುಷಿಯಾಗುವ ಸುದ್ದಿ ನೀಡಿದ್ದಾರೆ. ಮಾರ್ಚ್ 15ರಂದು ಪುನೀತ್ ನಟನೆಯ ಹಿಟ್ ಸಿನಿಮಾ ‘ಜಾಕಿ’ ರಿ ರಿಲೀಸ್ ಆಗಲಿದೆ.
ಪುನೀತ್ ಅಗಲಿದ ದಿನದಿಂದಲೂ(2021ರ ಅ.29) ಒಂದಲ್ಲ ಒಂದು ರೀತಿಯಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಸಂಭ್ರಮಿಸುತ್ತಲೇ ಬಂದಿದ್ದಾರೆ. 2022ರ ಮಾರ್ಚ್ 17ರಂದು ‘ಪುನೀತ್’ ನಟನೆಯ ಕೊನೆಯ ಕಮರ್ಷಿಯಲ್ ಸಿನಿಮಾ ‘ಜೇಮ್ಸ್’ ಬಿಡುಗಡೆಗೊಂಡಿತ್ತು.
ಅಂದು ವಿಶ್ವವ್ಯಾಪಿ 4 ಸಾವಿರಕ್ಕೂ ಅಧಿಕ ತೆರೆಗಳಲ್ಲಿ ‘ಜೇಮ್ಸ್’ ಪ್ರದರ್ಶನ ಕಂಡಿತ್ತು. ಇದನ್ನೊಂದು ಹಬ್ಬವಾಗಿ ಅಭಿಮಾನಿಗಳು ಆಚರಿಸಿದ್ದರು. ಈ ಮೂಲಕ ನೆಚ್ಚಿನ ನಟನಿಗೆ ನಮನ ಸಲ್ಲಿಸಿದ್ದರು. ಇದಾದ ಬಳಿಕ ಎಸ್. ನಾಗೇಂದ್ರ ಪ್ರಸಾದ್ ನಿರ್ದೇಶನದ ‘ಲಕ್ಕಿಮ್ಯಾನ್’ 2022ರ ಸೆ.9ರಂದು ತೆರೆಕಂಡಿತ್ತು. ಇದರಲ್ಲಿ ಪುನೀತ್ ಪ್ರೇಕ್ಷಕರೆದುರು ದೇವರಾಗಿ ಪ್ರತ್ಯಕ್ಷವಾಗಿದ್ದರು.
ಇದನ್ನು ಕಂಡು ಅಭಿಮಾನಿಗಳು ಭಾವುಕರಾಗಿದ್ದರು. 2022ರ ಅಕ್ಟೋಬರ್ 28ರಂದು ಪಿಆರ್ ಕೆ ಪ್ರೊಡಕ್ಷನ್ಸ್ ನಡಿ, ‘ವೈಲ್ಡ್ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಜೊತೆಗೂಡಿ ಪುನೀತ್ ರಾಜ್‌ಕುಮಾರ್ ತಯಾರಿಸಿದ್ದ ಡಾಕ್ಯೂಫಿಲಂ ‘ಗಂಧದಗುಡಿ’ ಬಿಡುಗಡೆಯಾಗಿತ್ತು. ಇದೇ ಡಾಕ್ಯುಫಿಲಂ 2023ರ ಮಾರ್ಚ್ 17ರಂದು ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಇದೀಗ ಪುನೀತ್ ಅವರ ಸಿನಿಮಾಗಳ ರಿರಿಲೀಸ್ ಅಭಿಮಾನಿಗಳಿಗೆ ಖುಷಿ ತಂದಿದೆ.
‘ದುನಿಯಾ’ ಸೂರಿ ನಿರ್ದೇಶನದ ‘ಜಾಕಿ’ ಸಿನಿಮಾವನ್ನು ಪಿಆರ್ ಕೆ ಪ್ರೊಡಕ್ಷನ್ಸ್ ಪ್ರಸೆಂಟ್ ಮಾಡುತ್ತಿದ್ದು, ಕೆಆರ್‌ಜಿ ಸ್ಟುಡಿಯೋಸ್ ರಿರಿಲೀಸ್ ಮಾಡುತ್ತಿದೆ. ಎಲ್ಲೆಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿಯನ್ನು ಕೆಆರ್ ಜಿ ಹಂಚಿಕೊಂಡಿಲ್ಲ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


