ತುಮಕೂರು: ಸರ್ಕಾರದ ನಿರ್ದೇಶನದನ್ವಯ ಕೆಲಸದ ಸ್ಥಳದಲ್ಲಿ ಮಹಿಳಾ ಸುರಕ್ಷತೆಯನ್ನು ಹೆಚ್ಚಿಸಲು 2 ದಿನದೊಳಗಾಗಿ ಎಲ್ಲ ಇಲಾಖಾ ಕಚೇರಿ ಹಾಗೂ ಅಧೀನ ಕಚೇರಿಗಳಲ್ಲಿ SHE BOX box portal ಅನ್ನು ಸೃಜಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇತ್ತೀಚೆಗೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಸುರಕ್ಷಿತ ವಾತಾವರಣವನ್ನು ಕಲ್ಪಿಸುವ ನಿಟ್ಟಿನಲ್ಲಿ ಆಂತರಿಕ ದೂರು ನಿವಾರಣಾ ಸಮಿತಿಯನ್ನು ರಚಿಸಿ SHE Box ಪೋರ್ಟಲ್‌ನಲ್ಲಿ ಕಾಲೋಚಿತಗೊಳಿಸಬೇಕೆಂದು ನಿರ್ದೇಶನ ನೀಡಿದರು.
ಕಚೇರಿ ಮುಖ್ಯಸ್ಥರು ತಮ್ಮ ಕಚೇರಿ ಮತ್ತು ಅಧೀನ ಕಚೇರಿ/ಖಾಸಗಿ ಸಂಸ್ಥೆ/ಕಾರ್ಖಾನೆ, ಶಾಲಾ-ಕಾಲೇಜುಗಳಲ್ಲಿ 10ಕ್ಕಿಂತ ಹೆಚ್ಚು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಲ್ಲಿ ಕಡ್ಡಾಯವಾಗಿ ಆಂತರಿಕ ದೂರು ನಿವಾರಣಾ ಸಮಿತಿಯನ್ನು ರಚನೆ ಮಾಡಬೇಕು. ಸಮಿತಿ ರಚನೆ ಮಾಡಿದ ಮಾಹಿತಿಯನ್ನು ಪೋರ್ಟಲ್ ವಿಳಾಸ https://shebox.wcd.gov.in/signin ನಲ್ಲಿ ಆಪ್ ಲೋಡ್ ಮಾಡಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) 2013ರ ಕಾಯ್ದೆಯನ್ವಯ ಮಹಿಳೆಯರಿಗೆ ಸುರಕ್ಷಿತ ವಾತಾವರಣವನ್ನು ಕಲ್ಪಿಸಬೇಕು. ಮುಂದಿನ ಎರಡು ದಿನದ ಒಳಗೆ 10ಕ್ಕಿಂತ ಹೆಚ್ಚು ಮಹಿಳಾ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸರ್ಕಾರಿ/ ಸರ್ಕಾರೇತರ ಕಚೇರಿ, ಶಾಲಾ ಕಾಲೇಜು, ಕಾರ್ಖಾನೆ ಮತ್ತು ಸಂಘ ಸಂಸ್ಥೆಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಆಂತರಿಕ ದೂರು ನಿವಾರಣಾ ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕೆಂದು ಸೂಚಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಉಪ ಆಯುಕ್ತ ಗಿರೀಶ್, ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಗಳು, ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ತೇಜಾವತಿ, ಮಹಿಳಾ ಅಭಿವೃದ್ಧಿ ಅಧಿಕಾರಿ ಪವಿತ್ರ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4