ಕಾಡಾನೆ ಹಾವಳಿ ಮಾನವ ಸಂಘರ್ಷಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ರಾಜ್ಯ ಸರಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ಆಗ್ರಹಿಸಿದರು.
ತಾಲೂಕಿನ ದೊಡ್ಡಮಾಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿನಕಲ್ ದುರ್ಗದ ಕೆಸವಿನಹಕಲು ಎಸ್ಟೇಟ್ ನಲ್ಲಿ ಆನಂದ ಪೂಜಾರಿ ಎಂಬ ಕಾರ್ಮಿಕನನ್ನು ಆನೆ ತುಳಿದು ಸಾಯಿಸಿದೆ. ಮೂಡಿಗೆರೆ ಕ್ಷೇತ್ರವೊಂದರಲ್ಲೇ ವರ್ಷದಲ್ಲಿ ೪-೫ ಮಂದಿ ಕಾಡಾನೆಗೆ ಬಲಿಯಾಗಿದ್ದಾರೆ. ಕಳೆದ ವರ್ಷ ಹೆಡದಾಳು ಗ್ರಾಮದ ಮೀನಾ ಕಾಡಾನೆಗೆ ಸಿಲುಕಿ ಮೃತಪಟ್ಟಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯಲ್ಲಿದ್ದರು.
ಪ್ರತಿಭಟನೆ ಕಾವು ಜೋರಾದಾಗ ಮುಖ್ಯಮಂತ್ರಿಗಳು ನನಗೆ ದೂರವಾಣಿ ಕರೆಮಾಡಿ ಪ್ರತಿಭಟನೆ ಬಿಟ್ಟು ಮುಂದಿನ ಸಂಸ್ಕಾರ ನಡೆಸಿ, ಆನೆ ಹಾವಳಿ ತಡೆಗೆ ಒಂದು ವಾರದಲ್ಲಿ ಅರಣ್ಯ ಸಚಿವರನ್ನು ಕಳುಹಿಸಿ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಈವರೆಗೆ ಯಾವೊಬ್ಬ ಜನಪ್ರತಿನಿಧಿ, ಅಧಿಕಾರಿ ಆನೆ ಹಾವಳಿ ತಡೆ ಬಗ್ಗೆ ಮಾತಾಡಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಬೇಜವಾಬ್ದಾರಿ ಸಚಿವರಾಗಿದ್ದಾರೆ. ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು ಆನೆ ದಾಳಿಯಿಂದ ನಿರಂತರ ಪ್ರಾಣಹಾನಿಯಾಗುತ್ತಿದ್ದರೂ ಬೇಜವಾಬ್ದಾರಿಯಿಂದ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಅವರು ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಿದರು.
ಈ ಸರಕಾರದಲ್ಲಿ ಅಭಿವೃದ್ಧಿಯೂ ಶೂನ್ಯವಾಗಿದೆ. ಸಮರ್ಥ ಸರ್ಕಾರವಿಲ್ಲ. ಹೀಗಾಗಿ ಕೊಲೆ ಸುಲಿಗೆಗಳು ಹೆಚ್ಚಾಗಿವೆ. ರಾಜ್ಯದ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದರು.
ಕೂಡಲೇ ಆನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಮೃತ ಆನಂದ ಪೂಜಾರಿ ಕುಟುಂಬಕ್ಕೆ ೫೦ ಲಕ್ಷ ರೂ ಪರಿಹಾರ ನೀಡಬೇಕು. ಕುಟುಂಬದ ಒಬ್ಬ ಸದಸ್ಯನಿಗೆ ಸರಕಾರಿ ಉದ್ಯೋಗ ನೀಡಬೇಕು. ಇಲ್ಲದಿದ್ದಲ್ಲಿ ಬಿಜೆಪಿಯಿಂದ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಹೇಳಿದರು. ಮುಖಂಡರಾದ ರವಿ, ಸೋಮಶೇಖರಪ್ಪ, ಮಂಜಣ್ಣ, ವಿಜಯ್ ಕುಮಾರ್ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


