ಹಾಸನ: ಮೇಕೆದಾಟು ಯೋಜನೆ ಜಾರಿಗೆ ತರುವಂತೆ ಆಗ್ರಹಿಸಿ ಕಾಂಗ್ರೆಸ್ ನಡೆಸಲಿರುವ ಪಾದಯಾತ್ರೆಗೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಪರೋಕ್ಷ ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಇವರೇ(ಡಿ.ಕೆ.ಶಿವಕುಮಾರ್) ನೀರಾವರಿ ಸಚಿವರಾಗಿದ್ದರು. ಆಗ ಯಾಕೆ ಮೇಕೆದಾಟು ಯೋಜನೆ ಮಾಡಿಸಲಿಲ್ಲ. ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರ ಇತ್ತು. ಈ ಯೋಜನೆ ಜಾರಿ ಮಾಡಬಹುದು ಎಂದು ಆಗ ಏಕೆ ಇವರಿಗೆ ಅನ್ನಿಸಲಿಲ್ಲ ಎಂದು ಅವರು ಹೆಸರು ಪ್ರಸ್ತಾಪಿಸದೇ ಪ್ರಶ್ನಿಸಿದರು.
ರಾಜ್ಯದಲ್ಲಿ 19 ತಿಂಗಳು ಕುಮಾರಸ್ವಾಮಿ ಅಧಿಕಾರ ಮಾಡಿದ್ದರು. ಆಗ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಜೋಡಿಗೆ ಜೋಡೆತ್ತು ಎಂದು ಹೇಳುತ್ತಿದ್ದರು. ಈಗ ಇದರಲ್ಲಿ ಒಂದು ಎತ್ತು ಮೇಕೆದಾಟು ಕಡೆಗೆ ಹೋಗಿದೆ. ನಾವು ಏನು ಮಾಡೋಣ ಸ್ವಾಮಿ ಎಂದು ರೇವಣ್ಣ ಪ್ರಶ್ನಿಸಿದರು. ಕುಮಾರಸ್ವಾಮಿ ಎಲ್ಲರನ್ನು ನಂಬುತ್ತಾರೆ, ಪಾಪ ಹೃದಯವಂತರು ಅವರು. ನಮ್ಮ ಹತ್ತಿರ ಬಂದರೆ ಯಾವುದು ಒದೆಯುತ್ತವೆ ಗೊತ್ತಾಗುತ್ತದೆ. ಕುಮಾರಣ್ಣ ಏನ್ಮಾಡ್ತಾರೆ ಒದೆಯುವುದಕ್ಕೂ ಮೇವು ಹಾಕ್ತಾರೆ ಎಂದು ಡಿ.ಕೆ.ಶಿವಕುಮಾರ್ ಗೆ ಚುಚ್ಚಿದರು.
ಕೃಷ್ಣಾ ನದಿ ಕೊಳ್ಳದ ಕಾಮಗಾರಿಗಳಲ್ಲಿ ವ್ಯಾಪಾರ ಮುಗಿಸಿ ಈಗ ಮೇಕೆದಾಟಲ್ಲಿ ವ್ಯಾಪಾರ ಮಾಡೋಕೆ ಹೊರಟಿದ್ದಾರೆ. ರಾಜ್ಯದ ಜನರು ಇವರ ಉದ್ದೇಶಗಳ ಬಗ್ಗೆ ತಿಳಿಯಬೇಕು ಎಂದು ಅವರು ಇದೇ ವೇಳೆ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy