ತುರುವೇಕೆರೆ: ಪಟ್ಟಣದಲ್ಲಿ ಕೈಗೊಂಡಿರುವ ಸಿ.ಸಿ ರಸ್ತೆ ಮತ್ತು ಸಿ.ಸಿ ಚರಂಡಿ ನಿರ್ಮಾಣ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಎ.ಐ.ಸಿ.ಸಿ ಸದಸ್ಯ ಸುಬ್ರಮಣಿ ಶ್ರೀಕಂಠೇಗೌಡ ಆರೋಪಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ನಡೆಯುವ ಯಾವುದೇ ಕಾಮಗಾರಿಗಳು ಗುಣಮಟ್ಟದಲ್ಲಿರಬೇಕು. ಇದಕ್ಕೆ ಸರ್ಕಾರ ಬದ್ಧವಾಗಿದೆ. ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಅದರಂತೆ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನ್ಸಿಪಾಲಿಟಿ) ಯೋಜನೆ (ಹಂತ-4)ರ ಯಡಿಯಲ್ಲಿ ತುಮಕೂರು ಜಿಲ್ಲೆ ತುರುವೇಕೆರೆ ಪಟ್ಟಣ. ಪಂಚಾಯಿತಿಯಲ್ಲಿ ಸುಮಾರು ರೂ. 3.5 ಕೋಟಿಗಳಲ್ಲಿ ಕ್ರಿಯಾ ಯೋಜನೆ ರೂಪಿಸಿ ಟೆಂಡರ್ ಕರೆದು ಕಾಮಗಾರಿಯನ್ನು ಎನ್.ದಿನೇಶ್ (ಬೂಮ್ರಾ ಬಿಲ್ಡರ್ಸ್) ರವರು ಗುತ್ತಿಗೆಯನ್ನು ಪಡೆದಿದ್ದು, ಸದರಿಯವರು ಕಾಮಗಾರಿಯನ್ನು ನಿರ್ವಹಿಸದೇ ಸ್ಥಳೀಯ ಗುತ್ತಿಗೆದಾರರಿಗೆ ಉಪ-ಗುತ್ತಿಗೆಯನ್ನು ನೀಡಿದ್ದು, ಗುತ್ತಿಗೆದಾರರು ಮಾಡುತ್ತಿರುವ ಕಾಮಗಾರಿ ಕಳಪೆಯಾಗಿದ್ದು ಎಲ್ಲಾ ವಾರ್ಡ್ ಗಳಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿ ಮುಗಿಸುವ ಹಂತದಲ್ಲಿದ್ದು ಪಟ್ಟಣದಲ್ಲಿ ಕೈಗೊಂಡಿರುವ ಸಿ.ಸಿ ರಸ್ತೆ ಮತ್ತು ಸಿ.ಸಿ ಚರಂಡಿ ನಿರ್ಮಾಣ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಿದರು.
ಈ ಬಗ್ಗೆ ದೂರನ್ನು ಸರ್ಕಾರಕ್ಕೆಸಂಬಂಧಪಟ್ಟ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಸಲ್ಲಿಸಿದ್ದೇನೆ ಹಾಗೂ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಮತ್ತು ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಕಾಮಗಾರಿಯ ಹಣವನ್ನು ಪಾವತಿಸಬೇಡಿ ಎಂದು ಸರ್ಕಾರವನ್ನು ಒತ್ತಾಯಿಸಿದರು.
ಈ ಕಳಪೆ ಕಾಮಗಾರಿಯ ಬಗ್ಗೆ ಸಂಸದರಾದ ಬಸವರಾಜು ಹಾಗೂ ಮಾಜಿ ಶಾಸಕರಾದ ಮಸಾಲ ಜಯರಾಮ್ ರವರೂ ಸಹ ದೂರನ್ನು ಸಚಿವಾಲಯಕ್ಕೆ ನೀಡಿದ್ದಾರೆ. ಸಚಿವಾಲಯವು ದೂರಿನ ಕುರಿತು ನಿಯಮಾನುಸಾರ ಪರಿಶೀಲಿಸಿ ತುರ್ತು ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಕುರಿತು. ವರದಿಯನ್ನು ನಿರ್ದೇಶನಾಲಯಕ್ಕೆ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ ಎಂದರು.
ಕಾಮಗಾರಿಗಳು ಕಳಪೆಯಾಗಿರುವ ಕುರಿತು ದೂರನ್ನು ಪೌರಾಡಳಿತ ಸಚಿವರಿಗೆ ಸಲ್ಲಿಸಿದ್ದು ಸಚಿವರ ಆಪ್ತ ಕಾರ್ಯದರ್ಶಿ ರವರು ದೂರನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿ ಹಾಗೂ ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ತುರ್ತಾಗಿ ಅಗತ್ಯ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಕುರಿತು ವರದಿಯನ್ನು ಪೌರಾಡಳಿತ ನಿರ್ದೇಶನಾಲಯಕ್ಕೆ ಸಲ್ಲಿಸಲು ಸರ್ಕಾರ ಸೂಚನೆ ನೀಡಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ. ಪಂ ಸದಸ್ಯ ಯಜಮಾನ್ ಮಹೇಶ್, ತಮ್ಮಣ್ಣ ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ.