ತುಮಕೂರು: ತಾಲೂಕಿನ ದೇವರಹಟ್ಟಿ ಹಾಗೂ ಕೆಬ್ಬೆಪಾಳ್ಯ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಉಳಿಸಲು ಆಗ್ರಹಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸಿದರು.
ಎಐಡಿಎಸ್ ಓ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಹೆಸರಿನಲ್ಲಿ ರಾಜ್ಯದ 40,000 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಹಾಗೂ ತುಮಕೂರು ತಾಲೂಕಿನ ದೇವರಹಟ್ಟಿ ಮತ್ತು ಕೆಬ್ಬೇಪಾಳ್ಯ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಉಳಿಸಬೇಕು ಎಂದು ಗ್ರಾಮದ ಪೋಷಕರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿಯಾದ ಲಕ್ಕಪ್ಪ ಮಾತನಾಡಿ, ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಡಿಯಲ್ಲಿ ರಾಜ್ಯದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸಿದೆ, ಒಟ್ಟು ರಾಜ್ಯದಲ್ಲಿ 40,000 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ಯೋಜನೆ ಇದಾಗಿದೆ. ಈ ಯೋಜನೆಯಂತೆ ತುಮಕೂರು ತಾಲೂಕಿನ ಸಮುದ್ರನಹಳ್ಳಿಯನ್ನ ಮ್ಯಾಗ್ನೆಟ್ ಶಾಲೆಯೆಂದು ಗುರುತಿಸಿದ್ದು, ಈ ಶಾಲೆಗೆ ಇದರ ಸುತ್ತಮುತ್ತ ಬರುವ ಹಳ್ಳಿಗಳಾದ ಕೆಬ್ಬೆಪಾಳ್ಯ, ದೇವರಹಟ್ಟಿ, ಗುಲಗಂಜಿಹಳ್ಳಿ, ಮತ್ತು ಕೋಡಿಪಾಳ್ಯ ಈ ಊರುಗಳ ಶಾಲೆಗಳು ವಿಲೀನಗೊಳಿಸಲಾಗುತ್ತದೆ, ಈ ಕೆಪಿಎಸ್ ಮ್ಯಾಗ್ನೆಟ್ ಶಾಲೆಯು ಎರಡು ಗ್ರಾಮದಿಂದ ಮೂರರಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿದೆ ಅಲ್ಲಿಗೆ ಈ ಮಕ್ಕಳು ಹೇಗೆ ಹೋಗಲು ಸಾಧ್ಯ? ಇಲ್ಲಿ ವಾಸಿಸುವ ಜನರೆಲ್ಲಾ ರೈತರು, ಕಾರ್ಮಿಕರು ಅವರೆಲ್ಲರೂ ಬೆಳಿಗ್ಗೆ ಹೊಲದ ಕೆಲಸಕ್ಕೆ ಹೋದರೆ ಬರುವುದು ಸಂಜೆ ಆಗುತ್ತದೆ. ಹಾಗಾಗಿ ತಮ್ಮ ಮಕ್ಕಳನ್ನು ಇಡೀ ದಿನ ಸರ್ಕಾರಿ ಶಾಲೆಗಳ ಮೇಲೆ ನಂಬಿಕೆಯಿಂದ ಶಿಕ್ಷಣ ಕಲಿಯಲು ಬಿಟ್ಟು ಹೋಗುತ್ತಾರೆ. ಈ ಶಾಲೆಯ ಶಿಕ್ಷಣಕ್ಕೆ ಒತ್ತು ನೀಡಬೇಕು, ಈ ಶಾಲೆಗಳನ್ನ ಯಾವುದೇ ಕಾರಣಕ್ಕೂ ಮುಚ್ಚಬಾರದೆಂದು ಆಗ್ರಹಿಸಿದರು.
ಊರಿನ ಗ್ರಾಮಸ್ಥರು ಸಹ ನಮ್ಮ ಮಕ್ಕಳನ್ನು ಯಾವ ಊರಿನ ಶಾಲೆಗೂ ಕಳಿಸುವುದಿಲ್ಲ ನಮ್ಮ ಊರಿನ ಶಾಲೆಯಲ್ಲೇ ಓದಿಸುತ್ತೇವೆ ನಮ್ಮೂರಿನ ಶಾಲೆಯನ್ನು ಮುಚ್ಚಲು ನಾವು ಬಿಡುವುದಿಲ್ಲ ಮತ್ತು ಇನ್ನು ಹೆಚ್ಚು ಮೂಲಭೂತ ಸೌಕರ್ಯಗಳನ್ನು ಒದಗಿಸಿ ಉಳಿಸಬೇಕೆಂದು ಹೇಳಿದರು. ನಮ್ಮ ಮಕ್ಕಳನ್ನು ದೂರದ ಊರಿಗೆ ಕಳುಹಿಸುವುದಿಲ್ಲ , ಏನಾದರೂ ಅನಾಹುತಗಳಾದರೆ ಯಾರು ಹೊಣೆ ಎಂದು ಜನರು ತಮ್ಮ ಕಳವಳವನ್ನು ವ್ಯಕ್ತ ಪಡಿಸಿದರು.
ಪ್ರತಿಭಟನೆಯ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯದರ್ಶಿಮಂಡಳಿ ಸದಸ್ಯರಾದ ಭರತ್ ಎಸ್ ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮದ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


