ವರದಿ : ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ: ತಾಲೂಕಿನ ಅಕ್ಕಿರಾಂಪುರ ಗ್ರಾಮ ಪಂಚಾಯಿತಿಗೆ 15 ದಿನಕ್ಕೊಮ್ಮೆ ಮಾತ್ರ ಪಿಡಿಓ ಬರ್ತಾರೇ. ಸಾಮಾನ್ಯ ಸಭೆಯೇ ಮಾಡದೇ ಪಿಡಿಓ ಮನೆಯ ಬಳಿ ಹೋಗಿ ಸದಸ್ಯರ ಸಹಿ ಪಡಿತಾರೇ. ಅನುದಾನದ ಲೆಕ್ಕಾ ಕೇಳಿದ್ರೇ ಗ್ರಾ.ಪಂ.ಯ ಪಿಡಿಓ ಮತ್ತು ಅಧ್ಯಕ್ಷೆ ಉಡಾಫೆ ಉತ್ತರ ನೀಡ್ತಾರೇ ಎಂದು ಆರೋಪಿಸಿ ಸದಸ್ಯರು ಪ್ರತಿಭಟನೆ ನಡೆಸಿರುವ ಘಟನೆ ಮಂಗಳವಾರ ನಡೆದಿದೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅಕ್ಕಿರಾಂಪುರ ಗ್ರಾ.ಪಂ.ಯ ಮಧುಸೂಧನ್ ಮತ್ತು ಲೋಕೇಶ್ ಎಂಬ ಸದಸ್ಯರು ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ, ಅಧ್ಯಕ್ಷೆಯ ಪತಿ ನಾಗರಾಜು ಮತ್ತು ಪಿಡಿಓ ರವಿಕುಮಾರ್ ವಿರುದ್ದ ತಕ್ಷಣ ಶಿಸ್ತುಕ್ರಮ ಕೈಗೊಳ್ಳುವಂತೆ ಗ್ರಾ.ಪಂ. ಕಚೇರಿ ಮುಂಭಾಗ ಸ್ಥಳೀಯರ ಜೊತೆಗೂಡಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಅಕ್ಕಿರಾಂಪುರ ಗ್ರಾ.ಪಂ. ಸದಸ್ಯ ಮಧುಸೂಧನ್ ಮಾತನಾಡಿ, ಗ್ರಾಪಂ ಸಾಮಾನ್ಯ ಸಭೆ ಮಾಡಿ 6 ತಿಂಗಳಾಗಿದೆ. ಅಭಿವೃದ್ದಿಯ ಬಗ್ಗೆ ಪ್ರಶ್ನಿಸಿದ್ರೇ ಗ್ರಾ.ಪಂ. ಪಿಡಿಓ ಉಡಾಫೆ ಉತ್ತರ ನೀಡ್ತಾರೇ. ಜನರಿಗೆ ಉತ್ತರ ಕೊಡಲು ಆಗದೇ ರಾಜಿನಾಮೇ ಕೊಡುವಂತಹ ದುಸ್ಥಿತಿ ಬಂದಿದೆ. ಗೃಹಸಚಿವ ಡಾ.ಜಿ.ಪರಮೇಶ್ವರ ಮತ್ತು ಸರಕಾರದ ಕಾರ್ಯದರ್ಶಿ ಅತೀಕ್ ಅಹಮ್ಮದ್ ಅವರ ಗಮನಕ್ಕೆ ತರುವಂತ ಕೆಲಸ ಮಾಡುತ್ತೇವೆ ಎಂದರು.
ಅಕ್ಕಿರಾಂಪುರ ಗ್ರಾ.ಪಂ. ಸದಸ್ಯ ಲೊಕೇಶ್ ಮಾತನಾಡಿ, ಪಿಡಿಓ 15 ದಿನಕ್ಕೊಮ್ಮೆ ಮಾತ್ರ ಗ್ರಾಪಂಗೆ ಬರ್ತಾರೇ. ಜನರಿಗೆ ಸಮಸ್ಯೆ ಆದ್ರೇ ಕ್ಯಾಮೇನಹಳ್ಳಿಗೆ ಹೋಗ್ಬೇಕು. ಅಧ್ಯಕ್ಷೆಯ ಪತಿ ಮಾತು ಕೇಳಿ ಪಿಡಿಓ ನರೇಗಾ ಕ್ರಿಯಾಯೋಜನೆ ಮಾಡ್ತಾರೇ. ಪಿಡಿಓ ಮತ್ತು ಅಧ್ಯಕ್ಷರ ಬಗ್ಗೆ ಜಿಪಂ ಮತ್ತು ತಾಪಂಗೆ ದೂರು ನೀಡಿದ್ರು ಪ್ರಯೋಜನಾ ಆಗಿಲ್ಲ. ಅದಕ್ಕಾಗಿಯೇ ನಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇವೆ ಎಂದರು.
ತನಿಖೆಗೆ ತಾಲ್ಲೂಕು ಪಂಚಾಯತಿ ಇಓ ಆದೇಶ:
ಪಿಡಿಓ ಮತ್ತು ಅಧ್ಯಕ್ಷರ ಬಗ್ಗೆ ಏನೇ ಸಮಸ್ಯೆ ಇದ್ರು ಲೀಖಿತ ರೂಪದಲ್ಲಿ ದೂರು ನೀಡಿದ್ರೇ ತ್ವರಿತವಾಗಿ ತನಿಖೆ ಮಾಡಿಸುತ್ತೇನೆ. ಯಾರೇ ತಪ್ಪು ಮಾಡಿದ್ರು ಅವರ ವಿರುದ್ದ ಕ್ರಮಕ್ಕೆ ಜಿಪಂ ಸಿಇಓಗೆ ಬರೆಯುತ್ತೇನೆ. ಪ್ರತಿಭಟನೆ ಮಾಡುವುದರಿಂದ ಸಮಸ್ಯೆ ಬಗೆಹರಿಯೋದಿಲ್ಲ. ಪ್ರತಿಭಟನೆ ಕೈಬಿಟ್ಟು ಕಚೇರಿಯ ಒಳಗೆ ಬನ್ನಿ ನಿಮ್ಮ ಸಮಸ್ಯೆ ಹೇಳಿ ಎಂದು ಗ್ರಾಪಂ ಸದಸ್ಯರ ಮನವೋಲಿಸುವ ಪ್ರಯತ್ನ ಮಾಡಿದರು.
ವಸೂಲಾತಿ ರಸಿದಿ ಪುಸ್ತಕಗಳೇ ಇಲ್ವಂತೆ:
2020 ರಿಂದ 2024ರ ವರೇಗಿನ ಕಂದಾಯ ವಸೂಲಾತಿ ಮಾಡಿರುವ 90 ಪುಸ್ತಕಗಳೇ ಗ್ರಾಪಂಯಲ್ಲಿ ಇಲ್ವಂತೆ. 10ಲಕ್ಷಕ್ಕೂ ಅಧಿಕ ತೆರಿಗೆ ಹಣ ದುರುಪಯೋಗ ಮತ್ತು ಅಂಗಡಿ ಮಳಿಗೆಯ ಜೊತೆ ಸಂತೆ ಹರಾಜಿನ ಠೇವಣಿ ಹಣವು ಕಾಣೆಯಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರು ದಾಖಲೆ ಬಗ್ಗೆ ಪ್ರಶ್ನಿಸಿದ್ರೇ ಮಾಹಿತಿ ಹಕ್ಕಿನಲ್ಲಿ ಪಡೆದುಕೊಳ್ಳಿ ಅಂತಾರೇ. ಜಿಪಂ ಮತ್ತು ತಾಪಂಗೆ ದೂರು ನೀಡಿದ್ರು ಪ್ರಯೋಜನಾ ಆಗಿಲ್ಲ ಅಂತಾರೇ ಅಲ್ಲಿನ ಗ್ರಾಪಂ ಸದಸ್ಯರು.
ಅಕ್ಕಿರಾಂಪುರ ಮತ್ತು ಕ್ಯಾಮೇನಹಳ್ಳಿ ಗ್ರಾ.ಪಂ.ಯಲ್ಲಿ ಒತ್ತಡದ ನಡುವೆಯು ಜನರ ಕೆಲಸ ಮಾಡ್ತಿದ್ದೀನಿ. ಕಂದಾಯ ವಸೂಲಾತಿಯ ಹಳೆಯ ದಾಖಲಾತಿಯ ಬಗ್ಗೆ ನನಗೇನು ಗೊತ್ತಿಲ್ಲ. ಅಂಗಡಿ ಮಳಿಗೆ ಮತ್ತು ಸಂತೆ ಹರಾಜು ಪ್ರಕ್ರಿಯೆ ತ್ವರಿತವಾಗಿ ಆಗುತ್ತೇ. ನನ್ನ ಅವಧಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ.
— ರವಿಕುಮಾರ್, ಪಿಡಿಓ, ಅಕ್ಕಿರಾಂಪುರ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx