ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಕಸಬಾ ಹೋಬಳಿ ಹುಲೀಕುಂಟೆ ಗ್ರಾಮದ ಅಲೆಮಾರಿಗಳು ಸರ್ಕಾರಿ ಸವಲತ್ತುಗಳಿಂದ ವಂಚಿತವಾಗಿದ್ದು, ಈ ಬಗ್ಗೆ ತಾಲೂಕು ಆಡಳಿತ ಸಮಾಜ ಇಲಾಖೆ ಕಂಡೂ ಕಾಣದಂತೆ ಕಣ್ಣು ಮುಚ್ಚಿಕುಳಿತಿದೆ.
ಇಲ್ಲಿ ವಾಸಿಸುತ್ತಿರುವ 25 ಕುಟುಂಬಗಳ ಪೈಕಿ 12ರಿಂದ 15 ಜನಕ್ಕೆ ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಬರುತ್ತಿಲ್ಲ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಮೊದಲಾದ ಅಗತ್ಯ ದಾಖಲೆಗಳನ್ನು ಕೂಡ ನೀಡಲಾಗಿಲ್ಲ. ಕೊರಟಗೆರೆ ತಾಲೂಕು ಆಡಳಿತವು ಅಲೆಮಾರಿ ಸಮುದಾಯಗಳನ್ನು ನಿರ್ಲಕ್ಷ್ಯಿಸಿದ್ದು, ಅಲೆಮಾರಿ ಸಮುದಾಯಗಳ ಹಿತ ಕಾಯಬೇಕಾಗಿದ್ದ ಸಮಾಜ ಕಲ್ಯಾಣ ಇಲಾಖೆ ನಿದ್ದೆಗೆ ಜಾರಿದೆ.
ಗ್ರಾಮದಲ್ಲಿ ಅಲೆಮಾರಿಗಳಿಗೆ ಇದುವರೆವಿಗೂ ವೃದ್ದಾಪ್ಯ ವೇತನ, ಅಂಗವಿಕಲ ವೇತನ ಸೌಲಭ್ಯ ಮನೆಗೆ ತಲುಪಿಸಲು ಸಂಬಂಧಪಟ್ಟವರು ಸಂಪೂರ್ಣ ವಿಫಲವಾಗಿದ್ದಾರೆ. ಈ ಹಿಂದಿನ ಕೊರಟಗೆರೆ ತಹಶೀಲ್ದಾರ್ ನಹೀದಾ ಜಂ ಜಂರವರು ಈ ಜನರಿರುವ ಸ್ಥಳಕ್ಕೆ ಸಂಬಂಧಿಸಿದ ನೌಕರರನ್ನು ಕಳುಹಿಸಿ ಸ್ಥಳದಲ್ಲೇ ಬಹುತೇಕ ಮೂಲ ದಾಖಲೆಗಳಾದ ಆಧಾರ್, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಮಾಡಿಸಿ ಕೊಟ್ಟಿದ್ದು, ಈ ಮಧ್ಯೆ ತಹಶೀಲ್ದಾರ್ ರವರು ವರ್ಗಾವಣೆಯಾದ ಕಾರಣ ಈ ಸೌಲಭ್ಯಗಳಿಗೆ ತಡೆಯಾಗಿವೆ ಎಂದು ತುಮಕೂರಿನ ಭೂಮಿ ವಸತಿ ಹಾಗೂ ಸಾಮಾಜಿಕ ಹೋರಾಟ ಸಮಿತಿ ತಿಳಿಸಿದೆ.
ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ತಹಶೀಲ್ದಾರ್ ರವರು ಪದೇ ಪದೇ ಹೇಳಿಸಿಕೊಳ್ಳದೆ, ತುರ್ತಾಗಿ ಈ ಜಾಗಕ್ಕೆ ಸಂಬಂಧಿಸಿದ ನೌಕರರನ್ನು ಕಳುಹಿಸಿ, ತುರ್ತಾಗಿ ದಾಖಲೆಗಳನ್ನು ಸಿದ್ಧಪಡಿಸಿ ಪಿಂಚಣಿ ಸೌಲಭ್ಯ ಕಲ್ಪಿಸಿ ಕೊಡಬೇಕಾಗಿದೆ ಎಂದು ಸಮಿತಿ ಹೇಳಿದೆ.
ತುರ್ತಾಗಿ ಸ್ಥಳಕ್ಕೆ ಕೊರಗೆರೆ ತಹಶೀಲ್ದಾರ್ ಅವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಸಂಬಂಧಿಸಿದ ನೌಕರರೊಂದಿಗೆ ಸ್ಥಳಕ್ಕೆ ತೆರಳಿ, ಪಿಂಚಣಿ ಸೇರಿದಂತೆ ಪಡಿತರ ಹಾಗೂ ಚುನಾವಣಾ ಗುರುತಿನ ಚೀಟಿ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕಾಗಿ ಭೂಮಿ ವಸತಿ ಹಾಗೂ ಸಾಮಾಜಿಕ ಹೋರಾಟ ಸಮಿತಿ, ತುಮಕೂರು ಆಗ್ರಹಿಸಿದೆ.
ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕನ್ನು ನಮ್ಮತುಮಕೂರು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದ ವೇಳೆ ಪ್ರತಿಕ್ರಿಯಿಸಿದ ಅವರು, ಇದು ರೆವಿನ್ಯೂ ಡಿಪಾರ್ಟ್ ಮೆಂಟ್ ನಿಂದ ಬರೋದು, ನಮ್ಮದು ಸೋಷಿಯಲ್ ವೆಲ್ಫೇರ್ ಡಿಪಾರ್ಟ್ ಮೆಂಟ್ ಎಂದರು. ಅಲೆಮಾರಿಗಳ ಸಮಸ್ಯೆಗಳು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುತ್ತವೆ ಅಲ್ಲವೇ ಎಂದು ಪ್ರಶ್ನಿಸಿದಾಗ, ಇಡೀ ದೇಶಕ್ಕೆ ರಾಜ್ಯಕ್ಕೆ ವೃದ್ಧಾಪ್ಯ ವೇತನ ನೀಡೋದು ರೆವಿನ್ಯು ಡಿಪಾರ್ಟ್ ಮೆಂಟ್, ಅವರು ಸಕಾಲದಲ್ಲಿ ಅರ್ಜಿ ಕೊಟ್ಟು ಡಾಕ್ಯುಮೆಂಟ್ ಕೊಟ್ರೆ, ವಯಸ್ಸಿನ ಆಧಾರದಲ್ಲಿ ವೃದ್ಧಾಪ್ಯ ವೇತನ ಕೊಡ್ತಾರೆ ಎಂದರು.
ಒಟ್ಟಿನಲ್ಲಿ ಸಾಮಾಜಿಕ ನ್ಯಾಯದಿಂದ ವಂಚಿತವಾಗಿರುವ ಅಲೆಮಾರಿಗಳ ಸಮಸ್ಯೆಯನ್ನು ಪರಿಹರಿಸಲು ಸಂಬಂಧಪಟ್ಟವರು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಹಿಂದಿನ ತಹಶೀಲ್ದಾರ್ ನಹೀದಾ ಜಂ ಜಂ ಅವರು ತೋರಿದ ದಿಟ್ಟತನ ಮತ್ತು ಗಟ್ಟಿತನ ಈಗಿನ ತಹಶೀಲ್ದಾರ್ ತೋರುವರೇ? ಎನ್ನುವುದನ್ನು ಕಾದುನೋಡಬೇಕಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy