ಹಾಸನ: ಮಗಳ ಸಾವಿಗೆ ಅಳಿಯನೇ ಕಾರಣ ಎಂದು ಆರೋಪಿಸಿ ಸೆಲ್ಫಿ ವಿಡಿಯೋ ಮಾಡಿ ಅಳಿಯನ ಮನೆ ಬಾಗಿಲಲ್ಲಿ ಮಾವ ನೇಣಿಗೆ ಶರಣಾಗಿರುವ ಘಟನೆ ಬೇಲೂರು ತಾಲ್ಲೂಕಿನ ಮಾಳೆಗೆರೆ ಗ್ರಾಮದಲ್ಲಿ ನಡೆದಿದೆ.
ದೊಡ್ಡಗದ್ದವಳ್ಳಿ ಗ್ರಾಮದ ನಾಗರಾಜ್ (55) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಕಳೆದ ಒಂದು ಕೆಲ ದಿನಗಳ ಹಿಂದೆ ನಾಗರಾಜ್ ಅವರ ಮಗಳು ಹೇಮಾಶ್ರೀ ಮೃತಪಟ್ಟಿದ್ದು, ಇಂದು ಮಗಳ ತಿಂಗಳ ತಿಥಿ ಕಾರ್ಯ ಮಾಡಲು ನಿರ್ಧರಿಸಲಾಗಿತ್ತು. ಹೀಗಾಗಿ ಮಗಳ ತಿಥಿ ಕಾರ್ಯಕ್ಕೆ ತಂದೆ ಬಂದಾಗ, ಮನೆಗೆ ಬೀಗ ಹಾಕಿ ಅಳಿಯ ಪ್ರವೀಣ್ ಹಾಗೂ ಕುಟುಂಬಸ್ಥರು ನಾಪತ್ತೆಯಾಗಿದ್ದರು. ಇದನ್ನೆಲ್ಲ ಕಂಡು ನೊಂದ ತಂದೆ, ನನ್ನ ಮಗಳ ಸಾವಿಗೆ ಅಳಿಯ ಪ್ರವೀಣ್, ಅತ್ತೆ ಭದ್ರಮ್ಮ ಕಾರಣ ಎಂದು ಆರೋಪಿಸಿ ವೀಡಿಯೋ ಮಾಡಿದ್ದಾರೆ. ಮಗಳನ್ನು ವರದಕ್ಷಿಣೆ ಕಿರುಕುಳ ನೀಡಿ ಕೊಂದಿದ್ದಾರೆ. ನನ್ನ ಮಗಳಿಗೆ ಆದ ಪರಿಸ್ಥಿತಿ ಇನ್ಯಾರಿಗೂ ಆಗಬಾರದು ಎಂದು ಮನನೊಂದು ವಿಡಿಯೋ ಮಾಡಿ ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಒಂದೂವರೆ ವರ್ಷದ ಹಿಂದೆ ಮಾಳಿಗೆರೆಯ ಪ್ರವೀಣ್ ಎಂಬಾತನಿಗೆ ಹೇಮಾಶ್ರೀಯನ್ನು ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ಪತಿಯ ಮನೆಯವರು ವರದಕ್ಷಿಣೆಗಾಗಿ ಹಲವು ಬಾರಿ ಒತ್ತಡ ಹಾಕಿದ್ದರು. ಅಲ್ಲದೆ, ಗರ್ಭಿಣಿಯಾಗಿದ್ದ ಹೇಮಶ್ರೀಯನ್ನು ತವರು ಮನೆಗೆ ಕಳುಹಿಸಿದ್ದರು. ಈವೇಳೆ ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿತ್ತು. ಇದಾದ ಎರಡೇ ದಿನಗಳ ಬಳಿಕ ಹೇಮಾಶ್ರೀ ಸಾವನ್ನಪ್ಪಿದ್ದರು. ಗಂಡನ ಊರು ಮಾಳೆಗೆರೆಯಲ್ಲಿ ಹೇಮಶ್ರೀ ಅಂತ್ಯಕ್ರಿಯೆ ನಡೆಸಲಾಗಿತ್ತು. 11 ನೇ ದಿನದ ತಿಥಿ ಕಾರ್ಯದ ದಿನ ಗ್ರಾಮದ ಹಿರಿಯರು ಪಂಚಾಯ್ತಿ ನಡೆಸಿದ್ದರು. ವರದಕ್ಷಿಣೆಯಾಗಿ ನೀಡಿದ್ದ ಹಣ, ಒಡವೆಯನ್ನು ತಿಂಗಳ ತಿಥಿಯಿಂದದ ವಾಪಾಸ್ ನೀಡುವಂತೆ ತೀರ್ಮಾನ ಮಾಡಿದ್ದರು. ಆದರೆ ಇದೀಗ ಅಳಿಯನ ಮನೆಯವರು ಕಾಣೆಯಾಗಿದ್ದು, ಮಗಳನ್ನು ಕಳೆದುಕೊಂಡ ತಂದೆ ಅವರ ಮನೆಯ ಬಾಗಿಲಲ್ಲೇ ನೇಣಿಗೆ ಕೊರಳೊಡ್ಡಿದ್ದಾರೆ.
ವರದಿ: ಆಂಟೋನಿ ಬೇಗೂರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700