ವಿಚಾರಣಾಧೀನ ಕೈದಿಯಾಗಿ ನಟ ದರ್ಶನ್ ಜೈಲು ಸೇರಿ 3 ತಿಂಗಳು ಕಳೆದಿದೆ. ಸದ್ಯ ಬಳ್ಳಾರಿ ಕಾರಾಗೃಹದಲ್ಲಿ ದರ್ಶನ್ ಅವರನ್ನು ಇರಿಸಲಾಗಿದೆ. ಇವತ್ತಿಗೆ ನ್ಯಾಯಾಂಗ ಬಂಧನ ಮುಗಿಯಲಿದ್ದು ಎಲ್ಲಾ ಆರೋಪಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಹಾಜರಾಗಲಿದ್ದಾರೆ. ಮತ್ತೊಂದು ಕಡೆ ಜಾಮೀನು ಪಡೆಯಲು ಅರ್ಜಿ ಸಲ್ಲಿಸುವ ಪ್ರಯತ್ನ ನಡೀತಿದೆ.
ಪೆರೋಲ್ ಮೇಲೆ ಒಂದೆರಡು ಗಂಟೆ ಅವರನ್ನು ಜೈಲಿನಿಂದ ಹೊರಗೆ ಕರೆತರುವ ಬಗ್ಗೆ ಚರ್ಚೆ ನಡೀತಿದೆ. ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿ ಆಗಲು ಈ ವ್ಯವಸ್ಥೆ ಮಾಡುವ ಕಸರತ್ತು ಶುರುವಾಗಿದೆ. ಈ ಬಗ್ಗೆ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ವಾಹಿನಿಗೆ ಮಾಹಿತಿ ನೀಡಿದ್ದಾರೆ.
ರಿಯಲ್ ಸ್ಟಾರ್ ‘ಉಪೇಂದ್ರ’ ಚಿತ್ರದ 25 ವರ್ಷದ ಸಂಭ್ರಮಾಚರಣೆಗೆ ದರ್ಶನ್ ಕರೆತರುವ ಬಗ್ಗೆ ಚರ್ಚೆ ಶುರುವಾಗಿದೆ. ಸ್ವತಃ ಉಪೇಂದ್ರ ನಿರ್ದೇಶಿಸಿ ನಟಿಸಿದ್ದ ‘ಉಪೇಂದ್ರ’ ಸಿನಿಮಾ ದಾಖಲೆ ಬರೆದಿತ್ತು. ಈ ಚಿತ್ರವನ್ನು ಶೀಘ್ರದಲ್ಲೇ ರೀ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಇದೇ ಅಕ್ಟೋಬರ್ 22ಕ್ಕೆ ಸಿನಿಮಾ 25 ವರ್ಷ ಪೂರೈಸಲಿದೆ.
‘ಉಪೇಂದ್ರ’ ಚಿತ್ರವನ್ನು ಶಿಲ್ಪಾ ಶ್ರೀನಿವಾಸ್ ನಿರ್ಮಿಸಿದ್ದರು. ಇದೀಗ ನಿರ್ಮಾಪಕರು 25 ವರ್ಷಗಳ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದ್ದಾರೆ. ಬಹಳ ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸುವ ಲೆಕ್ಕಾಚಾರ ಶುರುವಾಗಿದೆ. ಇಡೀ ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರನ್ನು ಆಹ್ವಾನಿಸಿ ಕಂಡು ಕೇಳರಿಯದಂತೆ ಕಾರ್ಯಕ್ರಮ ನಡೆಸುವ ಆಲೋಚನೆಯಲ್ಲಿದ್ದಾರೆ. ಆ ಕಾರ್ಯಕ್ರಮಕ್ಕೆ ದರ್ಶನ್ ಅವರನ್ನು ಕರೆತರುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.
ವಕೀಲರ ಮೂಲಕ ದರ್ಶನ್ ಗೆ ಪೆರೋಲ್ ವ್ಯವಸ್ಥೆ ಮಾಡುವ ಬಗ್ಗೆ ಚರ್ಚೆ ನಡೀತಿದೆ ಎಂದು ಶಿಲ್ಪಾ ಶ್ರೀನಿವಾಸ್ ತಿಳಿಸಿದ್ದಾರೆ. ಇದು ಉದ್ಯಮದ ಹಬ್ಬ. ಉದ್ಯಮದ ಎಲ್ಲರೂ ಭಾಗಿ ಆಗಬೇಕು. ಡೆಪಾಸಿಟ್ ಇಟ್ಟು ದರ್ಶನ್ ಅವರನ್ನು ಪೆರೋಲ್ ಮೇಲೆ ಕರೆತರುವ ಸಾಧ್ಯತೆ ಬಗ್ಗೆ ಚಿಂತಿಸುತ್ತಿದ್ದೇವೆ ಎಂದಿದ್ದಾರೆ.
ಶಿಲ್ಪಾ ಶ್ರೀನಿವಾಸ್ ನಿರ್ಮಾಣದ ‘ಇಂಡಿಯನ್’ ಚಿತ್ರದಲ್ಲಿ ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ನಟಿಸಿದ್ದರು. ಈ ಬಗ್ಗೆಯೂ ಅವರು ಮಾತನಾಡಿದ್ದಾರೆ. ಅವರ ಕುಟುಂಬದ ಜೊತೆ ಒಳ್ಳೆಯ ಒಡನಾಟ ಇತ್ತು ಎಂದು ಹೇಳಿಕೊಂಡಿದ್ದಾರೆ. ತೂಗುದೀಪ ರಕ್ತದಲ್ಲಿ ಹಿಂಸೆ ಇಲ್ಲ. ಅವರದ್ದು ಸುಸಂಸ್ಕೃತ ಕುಟುಂಬ. ದರ್ಶನ್ ಸರ್ ನಮ್ಮ ಆಫೀಸ್‌ಗೆ ಬಂದು ಕೂರುತ್ತಿದ್ದರು. 5 ಲಕ್ಷ ರೂ. ಬಂಡಲ್ ನೋಡಬೇಕು ಎನ್ನುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q