ವರದಿ: ಮಂಜು ಗುರುಗದಹಳ್ಳಿ
ತಿಪಟೂರು: ಮಕ್ಕಳ ದಿನಾಚರಣೆಯ ಸಂಭ್ರಮದಲ್ಲಿ ಮಕ್ಕಳಿಗೆ ಸಿಹಿ ಹಂಚುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯನ್ನು ದುಷ್ಕರ್ಮಿಯೋರ್ವ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿಯ ಹಾಲುಕುರಿಕೆ ಗ್ರಾಮದಲ್ಲಿ ನಡೆದಿದೆ.
ಅಂಗನವಾಡಿ ಕಾರ್ಯಕರ್ತೆ 30 ವರ್ಷ ವಯಸ್ಸಿನ ಭಾರತಿ ಎಂಬವರು ಹತ್ಯೆಗೀಡಾದವರು ಎಂದು ಗುರುತಿಸಲಾಗಿದೆ. ಇವರ ಸಂಬಂಧಿ ಎನ್ನಲಾಗಿರುವ ದಿವಾಕರ ಎಂಬಾತ ಹತ್ಯೆ ಆರೋಪಿಯಾಗಿದ್ದಾನೆ. ಮಕ್ಕಳ ದಿನಾಚರಣೆಯ ಹಿನ್ನೆಲೆಯಲ್ಲಿ 11 ಗಂಟೆಯ ಸುಮಾರಿಗೆ ಭಾರತಿ ಅವರು ಮಕ್ಕಳಿಗೆ ಸಿಹಿ ಹಂಚುತ್ತಿದ್ದ ವೇಳೆ ಅಂಗನವಾಡಿ ಕೇಂದ್ರಕ್ಕೆ ಬಂದು ಗಲಾಟೆ ನಡೆಸಿದ್ದಾನೆ ಎನ್ನಲಾಗಿದೆ.
ಬಳಿಕ ಭಾರತಿಯವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಅಕ್ಕಪಕ್ಕದವರು ತಡೆಯಲು ಮುಂದಾದಾಗ ಚಾಕು ತೋರಿಸಿ ಬೆದರಿಸಿದ್ದಾನೆ. ಇದೇ ವೇಳೆ ಅಂಗನವಾಡಿಯ ಹಿಂಭಾಗಕ್ಕೆ ಭಾರತಿ ಅವರನ್ನು ಎಳೆದೊಯ್ದು ಚಾಕುವಿನಿಂದ ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಘಟನೆಯನ್ನು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಕಣ್ಣೆದುರೇ ಇಂತಹದ್ದೊಂದು ಘಟನೆ ನಡೆದಿದ್ದು, ಸ್ಥಳೀಯರನ್ನು ಕ್ಯಾರೇ ಮಾಡದೇ ಆರೋಪಿಯು ಈ ದುಷ್ಕೃತ್ಯವನ್ನು ನಡೆಸಿದ್ದಾನೆ. ಘಟನೆ ಸಂಬಂಧ ಇನ್ನಷ್ಟು ಮಾಹಿತಿಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700