ಹಿರಿಯೂರು: ಭಾರತದಾದ್ಯಂತ ನಿರ್ಗತಿಕರನ್ನು ಸಂಕಷ್ಟಕ್ಕೆ ಸಿಲುಕುತ್ತಿರುವ ಮಾರಕ ಕೊರೊನಾ ರೋಗದ ಸಂಕಷ್ಟ ಪರಿಸ್ಥಿತಿಯ ಎರಡೂ ಅಲೆಗಳ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದು, ಕೊರೊನಾ 3ನೇ ಅಲೆಯು ಮಕ್ಕಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದ್ದು ಈ ಬಾರಿ ತಾಲ್ಲೂಕಿನ ಮಕ್ಕಳ ಕಡೆ ಹೆಚ್ಚು ಗಮನ ಕೊಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗಭೂಷಣ್ ಹೇಳಿದರು.
ಹಿರಿಯೂರು ನಗರದ ರೋಟರಿ ಸಭಾಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ರೋಟರಿ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ 48 ಅಂಗನವಾಡಿ ಕೇಂದ್ರಗಳ ಕಾರ್ಯಕರ್ತರಿಗೆ ಹಮ್ಮಿಕೊಳ್ಳಲಾಗಿದ್ದ ಪ್ರಥಮ ಚಿಕಿತ್ಸೆ ಕಿಟ್ ಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರೋಟರಿ, ರೆಡ್ ಕ್ರಾಸ್ ಸಂಸ್ಥೆಗಳು ಸಮನ್ವಯ ಸಾಧಿಸಿ, ಜನತೆಗೆ ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಪ್ರಶಂಸನೀಯ ಕಾರ್ಯವಾಗಿದ್ದು, ರೆಡ್ ಕ್ರಾಸ್ ಸಂಸ್ಥೆಗೆ ತಾಲ್ಲೂಕು ಆಡಳಿತದಿಂದ ನಿವೇಶನಕ್ಕೆ ಶಿಫಾರಸ್ಸು ಮಾಡಲಾಗಿದ್ದು, ನಮ್ಮ ಇಲಾಖೆಯಿಂದ ಎಲ್ಲಾ ತರಹದ ಸಹಕಾರ ನೀಡಲಾಗುವುದು ಎಂಬುದಾಗಿ ಹೇಳಿದರು.
ತಾಲ್ಲೂಕು ತಹಶೀಲ್ದಾರರಾದ ಶಿವಕುಮಾರ್ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಕೊರೊನಾ ವಾರಿಯರ್ಸ್ ಆಗಿ ಎರಡೂ ಅಲೆಗಳಲ್ಲಿ ಮುಂಚೂಣಿ ಕಾರ್ಯ ನಿರ್ವಹಿಸಿದ್ದು, ಇದೀಗ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಹಾಗೂ ಬೂಸ್ಟರ್ ಡೋಸ್ ಅರ್ಹರಿಗೆ ಲಸಿಕೆ ಕೊಡುವ ಕಾರ್ಯದಲ್ಲಿ ಮುಂದಾಗಬೇಕು, ಎಂದರಲ್ಲದೆ, ತಾಲ್ಲೂಕಿನಲ್ಲಿ ಶೇ.80 ರಷ್ಟು ಲಸಿಕೆ ಕಾರ್ಯ ಪೂರ್ಣಗೊಂಡಿದ್ದು, ಉಳಿದಂತೆ ಲಸಿಕೆ ನೀಡುವ ಕಾರ್ಯ ಮುಂದುವರೆದಿದೆ ಎಂಬುದಾಗಿ ಹೇಳಿದರು.
ರೋಟರಿ ಅಧ್ಯಕ್ಷರಾದ ಕಿರಣ್ ಕುಮಾರ್ ಮಾತನಾಡಿ, ರೋಟರಿ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳು ಜೊತೆಯಾಗಿ ನೂರಾರು ಆರೋಗ್ಯ ಶಿಬಿರಗಳನ್ನು ನಡೆಸುವ ಜೊತೆಗೆ ಗಾಯನ ಸ್ಪರ್ಧೆ, ಕಲೆ, ಸಾಂಸ್ಕೃತಿಕ, ಕ್ರೀಡೆ, ಶಿಕ್ಷಣದಂತಹ ಜನಪಯೋಗಿ ಕೆಲಸಗಳಲ್ಲಿ ಸೇವೆ ಸಲ್ಲಿಸುತ್ತಿವೆ ಎಂಬುದಾಗಿ ಹೇಳಿದರು.
ಜಿಲ್ಲಾ ರೆಡ್ ಕ್ರಾಸ್ ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ರೆಡ್ ಕ್ರಾಸ್ ಸಂಸ್ಥೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಜನರಿಗೆ ಸೇವೆ ಸಲ್ಲಿಸಿದ್ದು, ಇದರಿಂದ 10 ಬಾರಿ ರಾಜ್ಯಮಟ್ಟದ ಪ್ರಶಸ್ತಿಗೆ ಪಾತ್ರವಾಗಿದೆ ಎಂಬುದಾಗಿ ಹೇಳಿದರು. ಈ ಸಂದರ್ಭದಲ್ಲಿ ಹೆಚ್.ಎಸ್. ಸುಂದರ್ ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಯಿ ಮುದ್ದಮ್ಮ, ವಕೀಲರ ಸಂಘದ ಕಾರ್ಯದರ್ಶಿ ರಂಗಸ್ವಾಮಿ, ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ತೇಜು, ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಎಸ್.ಜೋಗಪ್ಪ, ಕೇಶವಮೂರ್ತಿ, ಎ.ರಾಘವೇಂದ್ರ, ಸಣ್ಣಭೀಮಣ್ಣ, ರಾಜೇಶ್, ಪಿ.ಆರ್.ಸತೀಶ್ ಬಾಬು, ಶಶಿಕಲಾ ರವಿಶಂಕರ್, ಸಿ.ನಾರಾಯಣಾಚಾರ್, ನಗರಸಭೆ ಅಧ್ಯಕ್ಷರಾದ ರತ್ನಮ್ಮ, ಸುರೇಖಾ, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್. ಹಿರಿಯೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy