ಕರ್ನಾಟಕ ಮಾಜಿ ಸಿಂಗಂ ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡಿನ ಬಿಜೆಪಿ ನಾಯಕ ಅಣ್ಣಾಮಲೈ ವಿರುದ್ಧ ತಮಿಳುನಾಡಿನಲ್ಲಿ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ದೀಪಾವಳಿ ಸಮಯದಲ್ಲಿ ಪಟಾಕಿ ನಿಷೇಧಿಸುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿಯ ಹಿಂದೆ ಕ್ರಿಶ್ಚಿಯನ್ ಮಿಷನರಿಗಳಿಗೆ ಸೇರಿದ ಎನ್‌ಜಿಒಗಳ ಕೈವಾಡ ಇದೆ ಎಂದು ಅಣ್ಣಾಮಲೈ ಸಂದರ್ಶನವೊಂದರಲ್ಲಿ ಆರೋಪಿಸಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ. ಸೇಲಂ ಮೂಲದ ಸಾಮಾಜಿಕ ಕಾರ್ಯಕರ್ತ ವಿ. ಪಿಯೂಷ್ ಅಣ್ಣಾಮಲೈ ವಿರುದ್ಧ ಈ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ವಜಾ ಮಾಡುವಂತೆ ಮದ್ರಾಸ್ ಹೈಕೋರ್ಟ್‌ಗೆ ಅಣ್ಣಾಮಲೈ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಮದ್ರಾಸ್ ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅಣ್ಣಾಮಲೈ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಅಣ್ಣಾಮಲೈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಜಸ್ಟೀಸ್ ಸಂಜೀವ ಖನ್ನಾ ಅವರಿದ್ದ ಏಕಸದಸ್ಯ ಪೀಠ ಪ್ರಕರಣಕ್ಕೆ ತಡೆ ನೀಡಿ ದೂರು ದಾಖಲಿಸಿದ ವಿ. ಪಿಯೂಷ್ ಗೆ ನೋಟಿಸ್ ನೀಡಿದ್ದಾರೆ. ಇವರ ಪರ ಹಿರಿಯ ವಕೀಲರಾದ ಸಿದ್ಧಾರ್ಥ್ ಲೂತ್ರಾ, ಎಂ.ಎ ಚಿನ್ನಸ್ವಾಮಿ ವಾದ ಮಂಡಿಸಿದ್ದರು ಎನ್ನಲಾಗಿದೆ. ತನ್ನ ವಿರುದ್ಧ ಯಾವುದೇ ಪ್ರಾಥಮಿಕ ಪ್ರಕರಣ ಇಲ್ಲ ಎಂಬ ಹಿಂದಿನ ಅವಲೋಕನಗಳ ಹೊರತಾಗಿಯೂ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ ಎಂದು ಅಣ್ಣಾಮಲೈ ಪರ ವಕೀಲರು ವಾದಿಸಿದರು.
ಈ ವೀಡಿಯೋ ಸಂದರ್ಶನದ ನಂತರ ಸಾರ್ವಜನಿಕರಿಂದ ಯಾವುದೇ ವ್ಯತಿರಿಕ್ತ ಪ್ರತಿಕ್ರಿಯೆ ವ್ಯಕ್ತವಾದ ಬಗ್ಗೆ ಅಥವಾ ಹಿಂಸಾಚಾರ ನಡೆದ ಬಗ್ಗೆ ವರದಿಯಾಗಿಲ್ಲ ಎಂಬುದನ್ನು ಗಮನಿಸಿದರು. ಹೇಳಿಕೆಗಳ ಆಧಾರದ ಮೇಲೆ ಯಾವುದೇ ಸಾರ್ವಜನಿಕ ಅವ್ಯವಸ್ಥೆ ಅಥವಾ ಹಿಂಸಾಚಾರ ನಡೆದಿಲ್ಲ, ಹೈಕೋರ್ಟ್ ದ್ವೇಷದ ಭಾಷಣಕ್ಕಿಂತ ಹೆಚ್ಚು ಕುಂದು ಕೊರತೆಯನ್ನು ಗಮನಿಸಲು ವಿಫಲವಾಗಿದೆ. ಯಾವುದೇ ಪ್ರತಿಕ್ರಿಯೆಗಳಿಲ್ಲದ ಕಾರಣ, ಅಣ್ಣಾಮಲೈ ಮನವಿಯನ್ನು ಪರಿಗಣಿಸಬೇಕಾಗಿದೆ ಮತ್ತು ಇದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ಹಗೆತನವನ್ನು ಉತ್ತೇಜಿಸುವುದು) ಮತ್ತು 505 (1) (ಬಿ) (ಸಾರ್ವಜನಿಕ ನೆಮ್ಮದಿಯ ವಿರುದ್ಧ ನೀಡಿದ ಹೇಳಿಕೆಗಳು) ರ ಅಡಿಯಲ್ಲಿ ಬರುವುದಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿ ಪ್ರಕರಣಕ್ಕೆ ತಡೆ ನೀಡಿದೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


