ಹಿರಿಯೂರು: ತಾಲ್ಲೂಕಿನ ವಾಣಿ ಸಕ್ಕರೆ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜಿನಲ್ಲಿ ಸಾಂಸ್ಕೃತಿಕ ಸಮಿತಿ, ಐ.ಕ್ಯೂ.ಎ.ಸಿ, ಎನ್.ಎಸ್.ಎಸ್., ಕ್ರೀಡೆ, ಯೂತ್ ರೆಡ್ ಕ್ರಾಸ್, ರೇಂಜರ್ಸ್ ಹಾಗೂ ರೋವರ್ಸ್ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯೂರು ತಾಲ್ಲೂಕಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್ , ಮಹಿಳಾ ದಿನಾಚರಣೆ ಕೇವಲ ಒಂದು ದಿನದ ಆಚರಣೆಯಾಗಿ ಉಳಿಯದೇ, ಸಮಾಜದಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನಮಾನ, ಗೌರವ ಹಾಗೂ ಸ್ವಾತಂತ್ರ್ಯ ಸಿಗುವಂತಾಗಬೇಕು ಎಂದು ಹೇಳಿದರು.
ನಮ್ಮ ಭಾರತ ದೇಶದಲ್ಲಿ ಮಹಿಳೆಯರಿಗೆ ತಮ್ಮದೇ ಆದ ಸ್ಥಾನಮಾನ, ಗೌರವಗಳಿದ್ದು, ಸಮಾಜದಲ್ಲಿ ಮಹಿಳೆಯರನ್ನು ಅತ್ಯಂತ ಗೌರವಪೂರ್ಣವಾಗಿ ಕಾಣಲಾಗುತ್ತಿದೆ. ಆದರೂ ನಮ್ಮ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಇನ್ನು ಅನೇಕ ಮೂಢನಂಬಿಕೆ ಆಚರಣೆಗಳು, ಕಟ್ಟುಪಾಡುಗಳಿದ್ದು, ಈ ಎಲ್ಲಾ ಆಚರಣೆಗಳು ಹಾಗೂ ಕಟ್ಟುಪಾಡುಗಳಿಂದ ಮಹಿಳೆಯರು ಹೊರಬರಬೇಕು ಎಂದು ಕರೆ ನೀಡಿದರು.
ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರು ಒಂದು ಕುಟುಂಬಕ್ಕೆ ಎರಡು ಕಣ್ಣುಗಳಿದ್ದಂತೆ, ಆದರೂ, ಕೆಲವು ಸಂದರ್ಭದಲ್ಲಿ ಪುರುಷರಿಂದ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ಮಹಿಳೆಯರ ರಕ್ಷಣೆಗಾಗಿ ಸರ್ಕಾರ ಅನೇಕ ಕಾನೂನುಗಳನ್ನು ಜಾರಿಗೊಳಿಸಿದೆ. ಮಹಿಳೆಯರು ಈ ಕಾನೂನಿನ ಸದುಪಯೋಗ ಪಡೆಯಬೇಕಲ್ಲದೆ, ಅದರ ದುರುಪಯೋಗವಾಗದಂತೆ ಎಚ್ಚರ ವಹಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಣಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಧರಣೇಂದ್ರಯ್ಯ ಮಾತನಾಡಿ, ಭಾರತೀಯರ ಭವ್ಯ ಇತಿಹಾಸ ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ಮಹಿಳೆಯರ ಬಗ್ಗೆ ನಮ್ಮ ಸಮಾಜ ಅತ್ಯಂತ ಗೌರವ ಭಾವನೆ ಹೊಂದಿದ್ದು, ಇಂದಿನ ಆಧುನಿಕ ಜಗತ್ತಿನಲ್ಲಿ ಮಹಿಳೆಯರು ಸಾಮಾಜಿಕ, ಆರ್ಥಿಕ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡು ಯಶಸ್ವಿಯಾಗಿರುವುದಕ್ಕೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂತಹ ಜಾಗೃತಿ ಕಾರ್ಯಕ್ರಮಗಳೇ ಕಾರಣವಾಗಿವೆ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಪ್ರೊ.ಹೆಚ್.ಎನ್.ನರಸಿಂಹಯ್ಯ, ನಗರಸಭೆ ಸದಸ್ಯರಾದ ಸಣ್ಣಪ್ಪ, ಸಿಡಿಸಿ ಸದಸ್ಯರುಗಳಾದ ಕಬಡ್ಡಿ ಶ್ರೀನಿವಾಸ್, ಆನಂದ ಶೆಟ್ಟರು, ಶೋಭಾ, ದೈಹಿಕ ಶಿಕ್ಷಣ ನಿರ್ದೇಶಕರಾದ ಹೆಚ್.ತಿಪ್ಪೇಸ್ವಾಮಿ, ಕನ್ನಡ ವಿಭಾಗ ಮುಖ್ಯಸ್ಥರಾದ ಪುಷ್ಪಲತಾ, ಅಧೀಕ್ಷಕರಾದ ಸೌಮ್ಯ, ರೂಪಶ್ರೀ, ಗೀತಾ, ಶಿವಲೀಲಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಹರಿಪ್ರಸಾದ್ ರೈ, ಮೇಲ್ವಿಚಾರಕರಾದ ಮಂಜುಳಾ ಸೇರಿದಂತೆ ಕಾಲೇಜು ಸಿಬ್ಬಂದಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಕುಮಾರಿ ವಿ.ನಿರ್ಮಲ ಪ್ರಾರ್ಥಿಸಿದರು. ಇತಿಹಾಸ ಸಹಾಯಕ ಪ್ರಾಧ್ಯಾಪಕರಾದ ಬಿ.ಇ.ಜಗನ್ನಾಥ್ ಸ್ವಾಗತಿಸಿದರು. ಇತಿಹಾಸ ಸಹ ಪ್ರಾಧ್ಯಾಪಕರಾದ ಡಾ.ಸಿದ್ಧಲಿಂಗಯ್ಯ, ವಂದಿಸಿದರು, ಕುಮಾರಿ ವಿದ್ಯಾರ್ಥಿನಿ ಕುಮಾರಿ ಸೃಷ್ಠಿ ಕಾರ್ಯಕ್ರಮ ನಿರೂಪಿಸಿದರು.
ವರದಿ: ಮುರುಳಿಧರನ್ ಆರ್., ಹಿರಿಯೂರು ( ಚಿತ್ರದುರ್ಗ – ದಾವಣಗೆರೆ )
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB