ತುಮಕೂರು: ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಚಿತ್ರಕಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗವು “ಅಂತಿಮ ಆಯ್ಕೆಪಟ್ಟಿ”ಯನ್ನು ಜರೂರಾಗಿ ಪ್ರಕಟಿಸುವ ಮೂಲಕ, ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ನೀಡುವಂತೆ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ ಮನವಿ ಮಾಡಿಕೊಂಡಿದೆ.
ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ರಾಜ್ಯ ಸರ್ಕಾರದ ಒಂದು ಅಂಗಸಂಸ್ಥೆಯಾದ “ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ”ವು ಮೊರಾರ್ಜಿ ದೇಸಾಯಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ 2016ರಲ್ಲಿ ಚಿತ್ರಕಲಾ ಪದವೀಧರರಿಗೆ 230, ಚಿತ್ರಕಲಾ ಡಿಪ್ಲೋಮಾದವರಿಗೆ 230, ಒಟ್ಟು 460 ಚಿತ್ರಕಲಾ ಶಿಕ್ಷಕರ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗ ದ ಮೂಲಕ ಅರ್ಜಿ ಯನ್ನು ಕರೆಯಲಾಗಿತ್ತು.
ಅರ್ಜಿಗಳನ್ನು ಸ್ವೀಕರಿಸಿದ ನಂತರ ಅರ್ಹತಾ ಪಟ್ಟಿಯನ್ನು ಪ್ರಕಟಿಸಿ ದಾಖಲೆಗಳನ್ನು ಪರಿಶೀಲಿಸಿದ ನಂತರ ದಿನಾಂಕ:27-10-2021 ರಂದು ಚಿತ್ರಕಲಾ ಶಿಕ್ಷಕರು ಪದವೀಧರ 230 ಹುದ್ದೆಗಳ “ತಾತ್ಕಾಲಿಕ ಆಯ್ಕೆ ಪಟ್ಟಿ”ಯನ್ನು ಮತ್ತು ದಿನಾಂಕ:25-11-2021 ರಂದು ಚಿತ್ರಕಲಾ ಶಿಕ್ಷಕರು ಡಿಪ್ಲೋಮೋದವರ 230 ಹುದ್ದೆಗಳ “ತಾತ್ಕಾಲಿಕ ಆಯ್ಕೆ ಪಟ್ಟಿ”ಯನ್ನು ಪ್ರಕಟಿಸಿ ಕರ್ನಾಟಕ ಲೋಕಸೇವಾ ಆಯೋಗವು ಆಕ್ಷೇಪಣೆ ಸಲ್ಲಿಸುವವರಿಗೆ 7 ದಿನ ಕಾಲಾವಕಾಶ ಕೊಡುವುದರ ಮೂಲಕ “ತಾತ್ಕಾಲಿಕ ಆಯ್ಕೆಪಟ್ಟಿ”ಯನ್ನು ಪ್ರಕಟಿಸಿತ್ತು.
ಆದರೆ ಇನ್ನೂ ಕೂಡ ಅಂತಿಮ ಪಟ್ಟಿ ಪ್ರಕಟಗೊಂಡಿಲ್ಲ. ಆದ್ದರಿಂದ “ಅಂತಿಮ ಆಯ್ಕೆಪಟ್ಟಿ”ಯನ್ನು ಅತಿ ತುರ್ತಾಗಿ ಪ್ರಕಟಿಸುವಲ್ಲಿ ಕೆಪಿಎಸ್ಸಿ ಮುಂದಾಗಬೇಕು. ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಕ್ಕೆ ಅನುಕೂಲ ಮಾಡಿಕೊಡಬೇಕೆಂದು ತುಮಕೂರು ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಟರಾಜು ಜಿ.ಎಲ್., ಪ್ರಧಾನ ಕಾರ್ಯದರ್ಶಿ ಯತೀಶ್ ಕುಮಾರ್, ಉಪಾಧ್ಯಕ್ಷ ಪವನ್ ಆರ್., ಖಜಾಂಚಿ ಮಹಮ್ಮದ್ ಗೌಸ್ ಪೀರ್ ಮನವಿ ಮಾಡಿದ್ದಾರೆ.