ತುಮಕೂರು: ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ 2627 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗೂ ಮತಗಟ್ಟೆ ಮಟ್ಟದ ಏಜೆಂಟ್(ಬಿಎಲ್ ಎ)ಗಳನ್ನು ನೇಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ಮತದಾರರ ಪಟ್ಟಿ ತಯಾರಿಕೆ, ಬಿಎಲ್ ಓಗಳ ನೇಮಕಾತಿ ಹಾಗೂ ಇತರೆ ಚುನಾವಣಾ ವಿಷಯಗಳ ಕುರಿತು ನೋಂದಾಯಿತ/ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆಯನ್ನು ಸದೃಢಪಡಿಸುವ ಹಾಗೂ ಯಾವುದೇ ಚುನಾವಣೆಗಳನ್ನು ಪಾರದರ್ಶಕವಾಗಿ ನಡೆಸುವ ಸಂಬಂಧ ಈ ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಚುನಾವಣೆಗಳಿಗೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಹಾಗೂ ಇತರೆ ಚುನಾವಣಾ ಮಾಹಿತಿಗಳನ್ನು ಭಾರತ ಚುನಾವಣಾ ಆಯೋಗದ ವೆಬ್ ಸೈಟ್, ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವೆಬ್ ಸೈಟ್ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ವೆಬ್ ಸೈಟ್ ನಲ್ಲಿ ಕಾಲಕಾಲಕ್ಕೆ ಪ್ರಕಟಿಸಲಾಗುತ್ತಿದ್ದು, ರಾಜಕೀಯ ಪಕ್ಷಗಳು ಸದರಿ ವೆಬ್ ಸೈಟ್ ಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ ಅಂತಿಮ ಮತದಾರರ ಪಟ್ಟಿಯಂತೆ ಒಟ್ಟು 1140384 ಪುರುಷರು, 1165030 ಮಹಿಳೆಯರು ಹಾಗೂ 88 ಇತರೆ ಸೇರಿ ಒಟ್ಟು 2305502 ಮತದಾರರಿದ್ದಾರೆ. ಜಿಲ್ಲೆಯಲ್ಲಿರುವ 2627 ಮತಗಟ್ಟೆಗಳಿಗೆ 276 ಮತಗಟ್ಟೆ ಮಟ್ಟದ ಅಧಿಕಾರಿಗಳ ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮತದಾರರ ಗುರುತಿನ ಚೀಟಿಗಾಗಿ ಅರ್ಹರಿಂದ ಸ್ವೀಕೃತವಾದ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಲಾಗುತ್ತಿದ್ದು, ಗುರುತಿನ ಚೀಟಿಗಳನ್ನು ಅಂಚೆ ಮೂಲಕ ಮತದಾರರಿಗೆ ರವಾನಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮತದಾರರ ಪಟ್ಟಿ, ಎಪಿಕ್ ಕಾರ್ಡ್, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ತೆಗೆದುಹಾಕುವುದು, ವರ್ಗಾವಣೆಗಾಗಿ ಅಗತ್ಯ ದಾಖಲೆಗಳೊಂದಿಗೆ ನಿಗಧಿತ ನಮೂನೆಯಲ್ಲಿ ನಿರಂತರವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಮತದಾರರ ಪಟ್ಟಿ ನೋಂದಣಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ 1950ಯನ್ನು ಸಂಪರ್ಕಿಸಬಹುದಾಗಿದೆ ಎಂದು ವಿವರಿಸಿದರು.
ಬಿಎಲ್ ಓಗಳಿಗೆ ನಿರ್ಧಿಷ್ಟ ಸ್ಥಳ ನಿಗಧಿಪಡಿಸಲು ಸಲಹೆ:
ಮತಗಟ್ಟೆ ಮಟ್ಟದ ಅಧಿಕಾರಿ(ಬಿಎಲ್ ಓ)ಗಳಿಗೆ ಚುನಾವಣಾ ಕೆಲಸಗಳನ್ನು ನಿರ್ವಹಿಸಲು ಅನುವಾಗುವಂತೆ ಪ್ರತ್ಯೇಕವಾಗಿ ನಿರ್ಧಿಷ್ಟ ಸ್ಥಳ ನಿಗಧಿಪಡಿಸಿ ನೆರಳು, ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಗೆ ಸಲಹೆ ನೀಡಿದರು.
ಸಭೆಯಲ್ಲಿ ಚುನಾವಣಾ ತಹಶೀಲ್ದಾರ್ ರೇಷ್ಮ, ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4