ಆಧಾರ ರಹಿತ ಸಂತೆ ಭಾಷಣ ಮಾಡುವುದನ್ನು ಬಿಟ್ಟು ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ದಾಖಲೆ ಇದ್ದರೆ ಕಾಂಗ್ರೆಸ್ ನೀಡಲಿ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಹಗರಣವನ್ನು ಬೆಳಕಿಗೆ ತಂದಿದ್ದು ಗೃಹ ಸಚಿವರು, ಅವರನ್ನು ಅಭಿನಂದಿಸಬೇಕಾಗಿದ್ದ ಕಾಂಗ್ರೆಸ್ ಆರೋಪಿಸುತ್ತಿರುವುದು ಸರಿಯಲ್ಲ.
ಈ ಹಿಂದೆ ಬಿಟ್ಕಾಯಿನ್ ವಿಚಾರದಲ್ಲಿ ಇದೇ ರೀತಿ ಆರೋಪವನ್ನು ಕಾಂಗ್ರೆಸ್ ಮಾಡಿತ್ತು. ಕೊನೆಗೆ ಅದು ಶೂನ್ಯ ಆಯಿತು ಎಂದು ಟೀಕಿಸಿದರು.
ಚುನಾವಣೆ ಗಿಮಿಕ್ ಮಾಡಲು ಇನ್ನೂ ಸಮಯಾವಕಾಶವಿದೆ. ನಿಮ್ಮ ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿರುವಾಗ ಬಿಜೆಪಿ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು ಹೇಳಲು ಬರಬೇಡಿ. ಡಬಲ್ ಎಂಜಿನ್ ಸರ್ಕಾರದ ಭಯದಿಂದ ಕಾಂಗ್ರೆಸ್ ಈ ರೀತಿ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ ಎಂದು ಆರೋಪಿಸಿದರು.
ಸಚಿವ ಅಶ್ವಥನಾರಾಯಣ ಅವರು ಎಲ್ಲಿಯೂ ಕೂಡ ಮುಖ್ಯಮಂತ್ರಿಯಾಗುವುದಾಗಿ ಹೇಳಲಿಲ್ಲ. ಆದರೂ ಕಾಂಗ್ರೆಸ್ ನಾಯಕರು ಅವರ ಹೆಸರನ್ನು ಉಲ್ಲೇಖಿಸುವುದು ಸರಿಯಲ್ಲ. ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದ್ದು, ಸತ್ಯಾಂಶ ಹೊರಬರಲಿದೆ. ಎಷ್ಟೇ ದೊಡ್ಡವರಾದರೂ ಬಿಡುವುದಿಲ್ಲ. ಗೃಹ ಸಚಿವರ ಪಾತ್ರ ಈ ಪ್ರಕರಣದಲ್ಲಿ ಇಲ್ಲ ಎಂದು ಅಶೋಕ್ ಸ್ಪಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪಕ್ಷದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿಕೊಳ್ಳಲಿ. ನಮ್ಮ ಪಕ್ಷದ ವಿಚಾರ ನೋಡಿಕೊಳ್ಳಲು ಬಲಾಢ್ಯ ಕೇಂದ್ರದ ನಾಯಕತ್ವವಿದೆ. ಜೆಡಿಎಸ್, ಕಾಂಗ್ರೆಸ್ನಲ್ಲಿ ವಂಶದ ನಾಯಕತ್ವ ಇದೆ ಎಂದು ವಾಗ್ದಾಳಿ ನಡೆಸಿದರು. ವೈಯಕ್ತಿಕ ದ್ವೇಷಗಳು ರಾಜಕೀಯವಾಗಿ ಯಾರಿಗೂ ಒಳ್ಳೆಯದಲ್ಲ. ಸೈದ್ಧಾಂತಿಕವಾಗಿ ಹೋರಾಟ ನಡೆಸಬೇಕು ಎಂದು ಹೇಳಿದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5