ಕುಣಿಗಲ್: ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್ ಮಂಗಳವಾರ ಕುಣಿಗಲ್ ಪೊಲೀಸ್ ಠಾಣೆಗೆ ಬಂದು ಪರಿಶಿಷ್ಟರ ಕುಂದುಕೊರತೆ ಆಲಿಸಿದರು.
ಡಿವೈಎಸ್ ಪಿ ಮತ್ತು ಅಮೃತೂರು ಪಿಎಸ್ ಐ ದಲಿತರ ಸಮಸ್ಯೆಗಳಿಗೆ ಸ್ಪಂದಿಸದೆ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಭಾನುವಾರ ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟರ ಕುಂದುಕೊರತೆ ಸಭೆಯನ್ನು ದಲಿತ ಮುಖಂಡರು ಬಹಿಷ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಎಸ್ ಪಿ ಭೇಟಿ ನೀಡಿದ್ದರು.
ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡರು, ಇತ್ತೀಚೆಗೆ ತಾಲ್ಲೂಕಿನ ಹೆಗ್ಗಡತಿಹಳ್ಳಿ, ಚಾಕೇನಹಳ್ಳಿ, ಕೊಡವತ್ತಿ, ಹೊನ್ನಮಾಚನಹಳ್ಳಿ ಮತ್ತು ವಾಣಿಗೆರೆಗಳಲ್ಲಿ ನಡೆದಿರುವ ದಲಿತರ ಮೇಲಿನ ದೌರ್ಜನ್ಯಗಳಲ್ಲಿ ಡಿವೈಎಸ್ ಪಿ ಓಂಪ್ರಕಾಶ್ ಮತ್ತು ಅಮೃತೂರು ಪಿಎಸ್ ಐ ವರ್ತನೆಗಳನ್ನು ಖಂಡಿಸಿ ಮಾಹಿತಿ ನೀಡಿದರು.
ಪೊಲೀಸ್ ಅಧಿಕಾರಿಗಳು ದಲಿತರೊಂದಿಗೆ ಸೌಜನ್ಯದಿಂದ ವರ್ತಿಸದೆ, ಪೂರ್ವಾಗ್ರಹ ಪೀಡಿತರಾಗಿ ವರ್ತಿಸುತ್ತಿದ್ದಾರೆ. ನ್ಯಾಯ ಕೇಳಲು ಹೋದವರಿಗೆ ಬೆದರಿಕೆ ಹಾಕಿ ಠಾಣೆಯಿಂದ ಹೊರಗಟ್ಟುತ್ತಿದ್ದಾರೆ ಎಂದು ದೂರಿದರು.
ಸಮಸ್ಯೆಗಳನ್ನು ಆಲಿಸಿದ ಎಎಸ್ ಪಿ ಪುರುಷೋತ್ತಮ್, ಕೆಳ ಹಂತದ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ತೋರದ ಕಾರಣ ಸಮಸ್ಯೆಗಳು ಹೆಚ್ಚಾಗಿದೆ. ಇನ್ನೂ ಡಿವೈಎಸ್ ಪಿ ಸ್ಥಳಗಳಿಗೆ ತೆರಳಿ, ಸಮಸ್ಯೆಗಳನ್ನು ಅರಿತು ಕಾರ್ಯನಿರ್ವಹಿಸಿದಾಗ ಸಮಸ್ಯೆಗಳು ಕಡಿಮೆಯಾಗುತ್ತದೆ. ಜನಸ್ನೇಹಿ ವರ್ತನೆ ರೂಢಿಸಿಕೊಳ್ಳಬೇಕು. ದಲಿತ ಮುಖಂಡರು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪರಿಹಾರ ಕಂಡುಕೊಳ್ಳಬೇಕಿದೆ. ಮುಂದಿನ ದಿನಗಳಲ್ಲಿ ಸಮಸ್ಯೆಯಲ್ಲಿರುವ ಪರಿಶಿಷ್ಟರ ಕಾಲೋನಿಗಳಿಗೆ ತೆರಳಿ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು. ಕಾನೂನು ಇರುವುದೇ ಸಮಸ್ಯೆಗಳನ್ನು ಬಗೆಹರಿಸಿ ಶಾಂತಿ, ವ್ಯವಸ್ಥಿತ ಸಮಾಜ ನಿರ್ಮಾಣಕ್ಕೆ ಎಂದರು.
ಡಿವೈಎಸ್‌ಪಿ ಓಂ ಪ್ರಕಾಶ್ ಮಾತನಾಡಿ, ಕಾನೂನು ಪ್ರಕಾರ ಕಾರ್ಯನಿರ್ವಹಿಸುವಾಗ ಕೆಲವರಿಗೆ ಅನುಕೂಲವಾಗಿದೆ. ಕೆಲವರಿಗೆ ಅನಾನುಕೂಲವಾಗಿದೆ ಎಂದರು.
ತಾಲ್ಲೂಕಿನಲ್ಲಿ ಹತ್ತುಹದಿನೈದು ವರ್ಷದಿಂದ ಬೇರುಬಿಟ್ಟಿರುವ ಪೊಲೀಸರನ್ನು ಮೊದಲು ವರ್ಗಾವಣೆ ಮಾಡಿ ಎಂದು ದಲಿತ ಮುಖಂಡ ಬಿ.ಜಿ.ಶ್ರೀನಿವಾಸ್ ಆಗ್ರಹಿಸಿದರು.
ಸಿಪಿಐ ಮಾಧ್ಯನಾಯಕ್, ನವೀನ್ ಗೌಡ ಹಾಗೂ ದಲಿತ್ ನಾರಾಯಣ್, ರಾಮಲಿಂಗಯ್ಯ, ರಾಜು, ಮಡಕೆಹಳ್ಳಿ ರಾಮಕೃಷ್ಣ, ಪ್ರಶಾಂತ್ಕವಿ, ಬಿ.ಜಿ ಗಂಗಾಧರ್, ರಾಮಚಂದ್ರಯ್ಯ ಶ್ರೀನಿವಾಸ್ ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC