ತುಮಕೂರು: ಜಿಲ್ಲಾ ಘಟಕ ವತಿಯಿಂದ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ವತಿಯಿಂದ ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ಮಿಲನಗೊಳಿಸಿ ಉದ್ಯೋಗ ಭದ್ರತೆ ನೀಡಿ ಹಾಗೂ ಆತ್ಮಹತ್ಯೆ ಮಾಡಿಕೊಂಡು ಅತಿಥಿ ಉಪನ್ಯಾಸಕ ಹರ್ಷ ಶಾನಭೋಗ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಜಾಥಾ ಮತ್ತು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹೋರಾಟಗಾರರು, ಅತಿಥಿ ಉಪನ್ಯಾಸಕರನ್ನು ಅತ್ಯಂತ ಕನಿಷ್ಠ ವೇತನಕ್ಕೆ ದುಡಿಸಿಕೊಳ್ಳುವ ಮೂಲಕ ಸರ್ಕಾರ ಸರ್ಕಾರಿ ಜೀತ ಪದ್ಧತಿಯನ್ನು ಮುಂದುವರಿಸುತ್ತಿದೆ. ಪ್ರಜಾಪ್ರಭುತ್ವ ಮಾದರಿಯ ಕಲ್ಯಾಣ ಸರ್ಕಾರದ ನೀತಿಗೆ ಇದು ವಿರುದ್ಧವಾಗಿದೆ. ಯಾವುದೇ ಕಲ್ಯಾಣ ರಾಜ್ಯದಲ್ಲಿ ಹಸಿವು ಅಪಮಾನದಿಂದ ನೊಂದ ಯಾವುದೇ ವ್ಯಕ್ತಿ ಸಾಯಬಾರದು ಎಂಬುದು ಕಲ್ಯಾಣ ನೀತಿಗೆ ಒಳಪಟ್ಟ ಸರ್ಕಾರಗಳು ರಚನೆಗೊಂಡಿದೆ ಎಂದರು.
ಕೊರೊನಾದಂತಹ ಹೆಮ್ಮಾರಿ ಸಂದರ್ಭದಲ್ಲಿ ರಾಜ್ಯದಲ್ಲಿ ಲಕ್ಷಾಂತರ ಜನ ಸಾವಿಗೀಡಾದರು. ಉದ್ಯೋಗವಿಲ್ಲದೆ ಕೋಟ್ಯಾಂತರ ಯುವಕರು ತಾತ್ಕಾಲಿಕ ನೌಕರಿಯನ್ನೂ ಕಳೆದುಕೊಂಡು ಬೀದಿಗೆ ಬಂದು ಒಪ್ಪತ್ತಿನ ಗಂಜಿಗೂ ಪರದಾಡಿದರು. ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರು ಉದ್ಯೋಗ ವೇತನವಿಲ್ಲದೆ, ತರಕಾರಿ, ಮಾಸ್ಕ್ ಮಾರಾಟ ಮತ್ತು ಕೂಲಿ ಕೆಲಸ ಮಾಡಿದರು. ಇಷ್ಟಾದರೂ ಜೀವನ ನಿರ್ವಹಣೆ ಕಷ್ಟಕರವಾದಾಗ ಕೆಲವರು ಅನಿವಾರ್ಯವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲವರು ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ ಪಡೆಯಲು ಹಣವಿಲ್ಲದೆ ಆಸ್ಪತ್ರೆಯ ಬೆಡ್ ಗಳಲ್ಲಿ ಹೆಣವಾದರು. ಇದುವರೆಗೂ, 70ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಸಾವಿಗೀಡಾದ್ದಾರೆ. ಅವರನ್ನೇ ನಂಬಿದ ಹೆಂಡತಿ ಮಕ್ಕಳು ವಯೋವೃದ್ಧ, ತಂದೆ-ತಾಯಿಗಳು ಅಕ್ಷರಶಃ ಈಗ ಬೀದಿಯಲ್ಲಿ ಬಿದ್ದಿದ್ದಾರೆ. ಆದ್ದರಿಂದ ಸರ್ಕಾರ ಈ ಕೂಡಲೇ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು ಎಂದು ಇಂದು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸತ್ಯಾಗ್ರಹ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy