ತುಮಕೂರು: ಸರ್ಕಾರ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆಯನ್ನು ಒದಗಿಸಿ ಅವರ ಹಿತರಕ್ಷಣೆ ಮಾಡುವುದರ ಮೂಲಕ ಗಂಡಸ್ಥನ ಪ್ರದರ್ಶಿಸಬೇಕೆಂದು ಮಾಜಿ ಕೆಪಿಸಿಸಿ ಕಾರ್ಯದರ್ಶಿ ಹಾಗೂ ನಗರದ ಹಿರಿಯ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಅತಿಥಿ ಉಪನ್ಯಾಸಕರು ತಮ್ಮ ಸೇವಾ ಭದ್ರತೆ ಹಾಗೂ ಸೇವಾ ವಿಲೀನತೆಗಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ಅತಿಥಿ ಉಪನ್ಯಾಸಕರ ಹಿತ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದ್ದು, ಸುಮಾರು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರ ಅವರೊಂದಿಗೆ ಮಾತನಾಡುವ ಕನಿಷ್ಠ ಸೌಜನ್ಯ ತೋರಿಲ್ಲ. ಈ ಮಧ್ಯದಲ್ಲಿ ಹೊಸದೊಂದು ಆದೇಶ ಹೊರಡಿಸಿ ಅತಿಥಿ ಉಪನ್ಯಾಸಕರ ಒಗ್ಗಟ್ಟನ್ನು ಒಡೆದು ಆಳುವ ನೀಚ ನಡೆಗೆ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉನ್ನತ ಶಿಕ್ಷಣ ಸಚಿವರು ವೇದಿಕೆಯ ಮೇಲೆ ಸೂಟು ಬೂಟು ಧರಿಸಿ, ಗಂಡಸ್ಥನದ ಬಗ್ಗೆ ವೀರಾವೇಶವಾಗಿ ಮಾತನಾಡುತ್ತಾರೆ. ಅಷ್ಟು ಅಭಿವೃದ್ದಿಯ ಬಗ್ಗೆ ಕಾಳಜಿ ಹೊಂದಿರುವವರು ಅತಿಥಿ ಉಪನ್ಯಾಸಕರ ಹಿತ ಕಾಪಾಡಿ ತಮ್ಮ ಗಂಡಸ್ಥನ ಪ್ರದರ್ಶಿಸಲಿ ಎಂದು ಅವರು ಗುಡುಗಿದರು. ಸರ್ಕಾರ ಇನ್ನಾದರೂ ತನ್ನ ಮೊಂಡ ಧೋರಣೆಯನ್ನು ಬಿಟ್ಟು ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂಗೊಳಿಸಿ ತನ್ನ ಬದ್ಧತೆಯನ್ಮು ತೋರ್ಪಡಿಸಬೇಕೆಂದು ಆಗ್ರಹಿಸಿದರು.
ಇದೇ ವೇಳೆ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ನಮ್ಮ ಬೆಂಬಲವಿದ್ದು, ಅವರಿಗೆ ನ್ಯಾಯ ಸಿಗುವವರೆಗೂ ಅವರೊಂದಿಗೆ ನಾವಿರುತ್ತೇವೆಂದು ತಿಳಿಸಿ ಹೋರಾಟಕ್ಕೆ ಯಾವುದೇ ರೀತಿಯ ಸಹಕಾರಕ್ಕೂ ತಾವು ಸಿದ್ಧವಿರುವುದಾಗಿ ತಿಳಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಗುರುಪ್ರಸಾದ್, ಉಪನ್ಯಾಸಕರ ಹೋರಾಟ ಸಮಿತಿಯ ಅಧ್ಯಕ್ಷ ಸುನಿಲ್ ಕುಮಾರ್ ಮುಖಂಡರಾದ ಜಿ.ಕೆ.ನಾಗಣ್ಣ ರಂಗಧಾಮಯ್ಯ, ನಾಗಭೂಷಣ್ ಮುಂತಾದವರು ಉಪಸ್ಥಿತರಿದ್ದರು.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy