ಬೆಂಗಳೂರು: ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಟಿಂಬರ್ ಲೇಔಟ್‌ನಲ್ಲಿ ಮಂಗಳವಾರ ರಾತ್ರಿ 24 ವರ್ಷದ ಆಟೋ ಚಾಲಕನನ್ನು ಕಡಿದು ಕೊಲೆ ಮಾಡಲಾಗಿದೆ. ಮುಂದಿನ ತಿಂಗಳು ವಿವಾಹವಾಗಲಿರುವ ಆಟೋ ಚಾಲಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದ್ದು, ಹಳೆ ವೈಷಮ್ಯದ ಶಂಕೆ ವ್ಯಕ್ತವಾಗಿದೆ.
ಮೃತರನ್ನು ಅರುಣ್ ಎಂದು ಗುರುತಿಸಲಾಗಿದೆ. ಈತನಿಗೆ ಅಪರಿಚಿತ ದುಷ್ಕರ್ಮಿಗಳು ಹರಿತವಾದ ಆಯುಧಗಳಿಂದ 20ಕ್ಕೂ ಹೆಚ್ಚು ಬಾರಿ ಇರಿದಿದ್ದಾರೆ. ಅರುಣ್ ಅವರನ್ನು 2021 ರಲ್ಲಿ ಹಲ್ಲೆ ಪ್ರಕರಣದಲ್ಲಿ ಬಂಧಿಸಲಾಗಿತ್ತು ಎಂದು ವರದಿಯಾಗಿದೆ.
ಹಳೆ ವೈಷಮ್ಯದಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ವರದಿಗಳ ಪ್ರಕಾರ ಅರುಣ್ ಅವರ ಮದುವೆ ಜನವರಿಯಲ್ಲಿ ನಿಗದಿಯಾಗಿತ್ತು.“ಅರುಣ್ ನನ್ನ ಅಣ್ಣನ ಮಗ. ಐದು ವರ್ಷಗಳ ಹಿಂದೆ ಅವರ ತಂದೆ ತೀರಿಕೊಂಡಿದ್ದರಿಂದ ಅವರು ನನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ರಾತ್ರಿ 9:30ರ ಸುಮಾರಿಗೆ ನನಗೆ ಕರೆ ಬಂದಿದ್ದು, ಆತನನ್ನು ಕೊಲೆ ಮಾಡಲಾಗಿದೆ” ಎಂದು ಹೇಳಿರುವುದಾಗಿ ಅರುಣ್‌ನ ಚಿಕ್ಕಪ್ಪ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಬ್ಯಾಟರನಪುರ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಕೊಲೆಯ ತನಿಖೆ ನಡೆಯುತ್ತಿದೆ.


