ತುಮಕೂರು: 21ನೇ ಶತಮಾನದಲ್ಲೂ ಭಾರತದಲ್ಲಿ ಮುಟ್ಟಿನ ಬಗ್ಗೆ ತಪ್ಪು ಕಲ್ಪನೆಗಳಿವೆ. ವಿದೇಶಗಳಲ್ಲಿ ಇದರ ಬಗ್ಗೆ ಹೆಚ್ಚು ಅರಿವಿದೆ. ಹಾಗಾಗಿ ಅವರು ನೈರ್ಮಲ್ಯಕ್ಕೆ ಹೆಚ್ಚು ಕಾಳಜಿ ವಹಿಸುತ್ತಾರೆ. ನಮ್ಮ ಮಹಿಳಾ ಉದ್ಯೋಗಿಗಳ ಆರೋಗ್ಯ ದೃಷ್ಟಿಯಿಂದ ಮುಟ್ಟಿನ ಸಂದರ್ಭದಲ್ಲಿ ನೈರ್ಮಲ್ಯ ನಿರ್ವಹಣೆಯ ಬಗ್ಗೆ ನಿರಂತರ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮತ್ತು ಹಸಿರುದಳ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಹೊರಗುತ್ತಿಗೆ ನೌಕರರಿಗೆ‘ಮುಟ್ಟಿನ ಸಂದರ್ಭದಲ್ಲಿ ನೈರ್ಮಲ್ಯ ನಿರ್ವಹಣೆ’ಕುರಿತ ಮೂರು ದಿನಗಳ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು.
ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಹೊರಗುತ್ತಿಗೆ ನೌಕರರಿಗೆ ಪ್ರತಿ ತಿಂಗಳೂ ಸ್ಯಾನಿಟರಿ ಪ್ಯಾಡ್ಗಳನ್ನು ಉಚಿತವಾಗಿ ನೀಡಲಾಗುವುದು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಲಸಚಿವೆ ನಾಹಿದಾಜಮ್ ಜಮ್ ಮಾತನಾಡಿ, ಡಬ್ಲ್ಯೂಎಚ್ ಓ ಮತ್ತುಯುನಿಸೆಫ್ ಸಮೀಕ್ಷೆಯ ಪ್ರಕಾರ ಶೇ.60 ಮಹಿಳೆಯರಿಗೆ ಮುಟ್ಟಿನ ಬಗ್ಗೆ ಅರಿವೇ ಇರುವುದಿಲ್ಲ. ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರು ಹೇಳಿಕೊಳ್ಳುವುದಕ್ಕೆ ನಾಚಿಕೆಪಟ್ಟು ಖಿನ್ನತೆಗೆ ಒಳಗಾಗುತ್ತಾರೆ. ಮಹಿಳೆಯರಿಗೆ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದ್ದು ನೈರ್ಮಲ್ಯ ಶುಚಿತ್ವ ಕಾಪಾಡಿಕೊಳ್ಳಲು ಅವರಿಗೆ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದರು.
ಮುಟ್ಟಿನ ಅನೈರ್ಮಲ್ಯದಿಂದ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಸೋಂಕಿನಂತಹ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಯಾವುದೇ ಸಂಕೋಚವಿಲ್ಲದೆ ಪ್ರತಿಯೊಬ್ಬ ಹೆಣ್ಣು ಮಗು ಕೂಡ ಮುಟ್ಟಿನ ನೈರ್ಮಲ್ಯದ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಮಾಜಕಾರ್ಯ ವಿಭಾಗದ ಅಧ್ಯಕ್ಷ ಪ್ರೊ.ಬಿ. ರಮೇಶ್, ಹಿರಿಯ ಪ್ರಾಧ್ಯಾಪಕ ಪ್ರೊ.ಪರಶುರಾಮಕೆ.ಜಿ., ಹಸಿರುದಳದ ವ್ಯವಸ್ಥಾಪಕ ಮೋಹನ್ ಕುಮಾರ್ ಕೆ., ಸಮುದಾಯ ಸಂಘಟಕರಾದ ಸುನಿಲ್, ಶ್ರೀದೇವಿ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx