ಸರಗೂರು: ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಿ ಮಟಕೇರಿಯ ಆಸ್ಪತ್ರೆಯ ಆವರಣ ಅವ್ಯವಸ್ಥೆಯಿಂದ ಕೂಡಿದ್ದು, ಜನರ ಆರೋಗ್ಯ ಕಾಪಾಡುವುದು ಬಿಡಿ ಇಲ್ಲಿ ಆಸ್ಪತ್ರೆಯ ಆರೋಗ್ಯವನ್ನೇ ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಇಲ್ಲಿನ ಜನರು ಆರೋಪಿಸುತ್ತಿದ್ದಾರೆ.
ಬಿ ಮಟಕೇರಿ ಗ್ರಾಪಂನ ಶಿಕ್ಷಕರ ಭವನ, ವಿವಿಧ ರಸ್ತೆ ಕಾಮಗಾರಿ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿನ ಶಾಸಕರಾದ ಅನಿಲ್ ಚಿಕ್ಕಮಾದು ಅವರು ಮಾಡಿಸಿದ್ದಾರೆ ಎಂದು ಎಲ್ಲೆಡೆಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಆದರೆ, ಇಲ್ಲಿನ ಆಸ್ಪತ್ರೆ ಸ್ಥಿತಿ ನೋಡಿದರೆ, ಇಲ್ಲಿ ರೋಗಿಗಳು ಬಂದರೆ, ರೋಗ ಕಡಿಮೆಯಾಗುವುದಕ್ಕಿಂತ ಹೆಚ್ಚಾಗಬಹುದು ಎಂಬಂತಾಗಿದೆ ಎಂದು ಸ್ಥಳೀಯ ಮುಖಂಡ ಗೋವಿಂದರಾಜು ಈ ಬಗ್ಗೆ ಅಭಿಪ್ರಾಯಪಟ್ಟರು.
ಆಸ್ಪತ್ರೆ ಇಷ್ಟೊಂದು ಹದೋಗತಿಯಲ್ಲಿದ್ದರೂ ಪಂಚಾಯತ್ ಅಧಿಕಾರಿಗಳಾಗಲಿ, ಶಾಸಕರಾಗಲಿ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ತಾಲೂಕಿನ ಕಂದಲಿಕೆ ಹೋಬಳಿಯ ಮಟಕೆರಿ ಗ್ರಾಪಂ ವ್ಯಾಪ್ತಿಯ ಆಸ್ಪತ್ರೆಯ ಸುತ್ತಲೂ ಗಿಡಗಂಟಿಗಳು ಬೆಳೆದಿದ್ದು, ಆಸ್ಪತ್ರೆ ಮುಂಭಾಗದಲ್ಲಿ ನೀರಿನ ಗುಂಡಿಗಳಿದ್ದು, ಕೊಳಚೆ ನೀರಿನಿಂದಾಗಿ ಜನರು ರೋಗಗ್ರಸ್ತರಾಗುವ ಭೀತಿಯಲ್ಲಿದ್ದಾರೆ.
ಈ ಸಂಬಂಧ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಚಂದ್ರಶೇಖರ್ ಅವರನ್ನು ಪ್ರಶ್ನಿಸಿದಾಗ ಸುಮಾರು ವರ್ಷಗಳಿಂದ ಇಲ್ಲಿ ಆಂಬುಲೆನ್ಸ್ ಇಲ್ಲ. ಸಿಬ್ಬಂದಿ ಕೊರತೆಯಿಂದ ಜನರು ಕಷ್ಟಪಡುವಂತಾಗಿದೆ. ಇಲ್ಲಿಗೆ ಹೆಚ್ಚಾಗಿ ಹಾಡಿಯ ಜನರು ಬರುತ್ತಾರೆ. ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ ಇಲ್ಲಿನ ಅವ್ಯವಸ್ಥೆ ಬಗ್ಗೆ ಪತ್ರದ ಮೂಲಕ ತಿಳಿಸಿದ್ದೇವೆ. ತಾಲೂಕು ಶಾಸಕರಿಗೆ ಹಲವು ಬಾರಿ ಮನವಿ ನೀಡಿದ್ದೇವೆ ಎಂದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700