ತುಮಕೂರು: ಜಿಲ್ಲೆಯಲ್ಲಿ ಮೇ 28 ರಂದು ಮುಸ್ಲಿಮರು ಆಚರಿಸಲಿರುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಪ್ರಚೋದನೆ ನೀಡುವ ಬ್ಯಾನರ್, ಬಂಟಿಂಗ್ಸ್ ಸೇರಿದಂತೆ ಇತರೆ ಜಾಹೀರಾತು ಫಲಕಗಳನ್ನು ಅಳವಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಎಚ್ಚರಿಕೆ ನೀಡಿದರು.
ತುಮಕೂರು ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸೋಮವಾರ ನಡೆದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವಿಡಿಯೋಗಳ ಸತ್ಯಾಸತ್ಯತೆ ತಿಳಿಯದೇ ಯುವಕರು ಕಾನೂನು ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಬಕ್ರೀದ್ ಹಬ್ಬದ ಮುನ್ನ ಜಾನುವಾರು ಸಾಗಣೆ ಮಾಡುವವರು ಪಶು ಇಲಾಖೆ ವತಿಯಿಂದ ಅಗತ್ಯ ಪರವಾನಗಿ ಪಡೆಯಬೇಕು. ಕಾನೂನುಬಾಹಿರವಾಗಿ ಗೋವುಗಳನ್ನು ಸಾಗಣೆ ಮಾಡುವುದು ನಿಷಿದ್ಧವಾಗಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಕುರುಬಾನಿ ಸಂದರ್ಭದಲ್ಲಿ ಮಾಂಸ ಹಂಚುವ ವಿಚಾರದಲ್ಲಿ ಯಾವುದೇ ಗದ್ದಲ ಅಥವಾ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಒಂದು ವೇಳೆ ಶಾಂತಿ ಭಂಗವಾದರೆ 112ಕ್ಕೆ ಕರೆ ಬಂದರೂ ಅದನ್ನೇ ದೂರು ಎಂದು ಪರಿಗಣಿಸಿ ಎಫ್ ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು. ಹಬ್ಬವನ್ನು ಎಲ್ಲರೂ ಸೌಹಾರ್ದಯುತವಾಗಿ ಆಚರಿಸಬೇಕು. ಯಾವುದೇ ಗಲಾಟೆ ಅಥವಾ ಪ್ರಚೋದನೆಗೆ ಅವಕಾಶ ನೀಡದೆ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಯಾವ ವಿಷಯಗಳನ್ನು ನೋಡಬೇಕು, ಯಾವುದನ್ನು ತಪ್ಪಿಸಿಕೊಳ್ಳಬೇಕು ಎಂಬ ಕುರಿತು ಪೋಷಕರು ಮಕ್ಕಳಿಗೆ ಹಾಗೂ ಯುವಜನರಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಸಮಾಜದಲ್ಲಿ ನಡೆಯುವ ಅಹಿತಕರ ಘಟನೆಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಗರದಲ್ಲಿ ನಡೆದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಮಾಹಿತಿ, ಪ್ರಚೋದನಾಕಾರಿ ವಿಡಿಯೋಗಳು ಹಾಗೂ ಸಂದೇಶಗಳು ವೇಗವಾಗಿ ಹರಡುತ್ತಿವೆ. ಇವುಗಳಿಗೆ ಯುವಕರು ಸುಲಭವಾಗಿ ಪ್ರಭಾವಿತರಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು. ಪೋಷಕರು ಮಕ್ಕಳ ಮೊಬೈಲ್ ಬಳಕೆ, ಅವರು ವೀಕ್ಷಿಸುವ ವಿಷಯಗಳು ಹಾಗೂ ಸ್ನೇಹ ಬಳಗದ ಬಗ್ಗೆ ಗಮನಹರಿಸಬೇಕು ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


