ಬೆಂಗಳೂರು ಸೆಪ್ಟಂಬರ್ 30: ಉದ್ಯಾನ ನಗರಿ ಎಂದು ಕರೆಸಿಕೊಳ್ಳುವ ಬೆಂಗಳೂರಿನ ಹೃದಯ ಭಾಗದಲ್ಲಿರುವ ಕಬ್ಬನ್ ಪಾರ್ಕ್ ಮುಂದಿನ ನವೆಂಬರ್ ತಿಂಗಳಲ್ಲಿ ಸಾರ್ವಜನಿಕರಿಗೆ ಹೊಸ ಅನುಭವ ನೀಡಲು ತಯಾರಾಗಿದೆ.
ಕಬ್ಬನ್ ಉದ್ಯಾನದ ಸುಮಾರು 100ಎಕರೆ ವಿಸ್ತೀರ್ಣವನ್ನು ಅಭಿವೃದ್ಧಿಪಡಿಸಲು ಈ ಹಿಂದೆಯೆ ಯೋಜಿಸಲಾಗಿತ್ತು. ಅದಕ್ಕಾಗಿ ಒಟ್ಟು ಸುಮಾರು 34 ಕೋಟಿ ರು ವ್ಯಯಿಸಿ ಅನೇಕ ಕಾಮಗಾರಿ ಕೈಗೊಳ್ಳಲಾಗಿತ್ತು. ಇದೀಗ ಅವೆಲ್ಲ ಕಾಮಗಾರಿ ಯೋಜನೆಗಳು ಅಂತಿಮ ಹಂತಕ್ಕೆ ಬಂದಿದ್ದು, ನವೆಂಬರ್‌ನಲ್ಲಿ ಹೊಸ ರೂಪದಲ್ಲಿ ಉದ್ಯಾನವು ಎಲ್ಲರನ್ನು ಸೆಳೆಯಲಿದೆ.
ಉದ್ಯಾನದ ಹಸಿರನ್ನು ಹೆಚ್ಚಿಸಲು, ನಿತ್ಯ ವಾಯುವಿಹಾರ ಇನ್ನಿತರ ಕಾರಣಗಳಿಗೆ ಉದ್ಯಾನಕ್ಕೆ ಬರುವ ಜನರಿಗೆ ಅಗತ್ಯ ಮೂಲಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ನೂರು ಎಕರೆ ಪ್ರದೇಶದ ಬಳಕೆ ಮಾಡಿಕೊಳ್ಳಲಾಗಿದೆ. ಉದ್ಯಾನ ಅಭಿವೃದ್ಧಿ ಯೋಜನೆಯಡಿಯಲ್ಲಿ ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ನಗರದಲ್ಲಿರುವ ಅತ್ಯಂತ ಹಳೆಯ ಸುಮಾರು 9,000 ಕ್ಕೂ ಅಧಿಕ ಮರಗಳನ್ನು ಮ್ಯಾಪಿಂಗ್ ಮತ್ತು ಜಿಯೋ ಟ್ಯಾಗ್ ಮೂಲಕ ಗುರುತಿಸುವ ಅಭಿಯಾನ ಕೈಗೊಂಡಿದ್ದಾರೆ.
ಈಗಾಗಲೇ ಕಬ್ಬನ್ ಉದ್ಯಾನದ ಹಸಿರನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕಾಯೋನ್ಮುಖರಾಗಿರುವ ಸಿಬ್ಬಂದಿ 3,000 ಸಸಿಗಳನ್ನು ನೆಡುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ (ಕಬ್ಬನ್ ಪಾರ್ಕ್) ಎಚ್.ಟಿ.ಬಾಲಕೃಷ್ಣ ಅವರು ಮಾಹಿತಿ ನೀಡಿದ್ದಾರೆ.
ಈ ಎಲ್ಲ ಅಭಿವೃದ್ಧಿ ಕೆಲಸಗಳು ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ. ಉದ್ಯಾನದಲ್ಲಿ ಹೊಸ ಜಾಗಿಂಗ್ ಟ್ರ್ಯಾಕ್, ನವೀಕರಿಸಿದ ಫುಟ್‌ಪಾತ್‌ಗಳು ಹಾಗೂ ನೀರು ಕಾರಂಜಿಗಳು, ಉತ್ತಮ ಒಳರಸ್ತೆಗಳು ಮತ್ತು ಲ್ಯಾಂಡ್‌ಸ್ಕೇಪಿಂಗ್ ಕಾರ್ಯ ಪ್ರಗತಿಯಲ್ಲಿದೆ. ಇವೆಲ್ಲವು ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ. ನವೆಂಬರ್‌ಗೆ ಸಾರ್ವಜನಿಕರಗೆ ಮುಕ್ತವಾಗಬಹದು. ಒಟ್ಟು ಯೋಜನೆಯನ್ನು ಎರಡು ಹಂತದಲ್ಲಿ ಆರಂಭಿಸಲಾಗಿತ್ತು ಎಂದರು.
ಉದ್ದೇಶಿತ ಉದ್ಯಾನದ ವಿಶಾಲ ಪ್ರದೇಶದಲ್ಲಿ ಕಮಲದ ಕೊಳ, ಕರಗದ ಕುಂಟೆ ಕೊಳ ಮತ್ತು ಬೋಟಿಂಗ್ ಪಾಯಿಂಟ್, ಉದ್ಯಾನದ ಸುತ್ತಲಿನ ಗ್ರಿಲ್ ಕಾಮಗಾರಿ, ಬೆಂಕಿಗೆ ತುತ್ತಾಗುವ ಒಣಗಿದ ಬಿದಿರು ಗುಂಪು ತೆಗೆದು ಹೊಸ ಬಿದಿರು ನೆಡುವ ಕೆಲಸಗಳು ಪೂರ್ಣಗೊಂಡಿವೆ. ಎರಡು ವರ್ಷಗಳ ಹಿಂದೆಯೇ ಕಾಮಗಾರಿ ಆರಂಭವಾಗಿದ್ದರೂ ಸಹ ಉದ್ಯಾನಕ್ಕೆ ಆಗಮಿಸುವ ವಾಕರ್ಸ್ ಅಸೋಸಿಯೇಷನ್ ಸೇರಿದಂತೆ ಐದು ಗುಂಪುಗಳು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ವಿವರವಾದ ಯೋಜನಾ ವರದಿ ಅನ್ನು ಆರಂಭಿಕ ಹಂತದಲ್ಲಿ ಬದಲಿಸಬೇಕಾದ ಅನಿವಾರ್ಯತೆ ಎದುರಾಯಿತು ಎಂದು ಅವರು ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy