ತುಮಕೂರು: ಅಸಮಾನತೆ ತೊಡೆದು ಹಾಕಿ, ಸಮ ಸಮಾಜ ನಿರ್ಮಿಸುವುದು ಸರ್ಕಾರದ ಉದ್ದೇಶ. ಇದಕ್ಕೆ ಪೂರಕವಾಗಿ ಕಳೆದ 2 ವರ್ಷದಲ್ಲಿ ತಾಂಡಾಗಳ ಅಭಿವೃದ್ಧಿಗೆ ನೂರಾರು ಕೋಟಿ ವ್ಯಯಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ನಗರದಲ್ಲಿ ಶನಿವಾರ ತಾಂಡಾ ಅಭಿವೃದ್ಧಿ ನಿಗಮ, ಜಿಲ್ಲಾ ಬಂಜಾರ ಸೇವಾಲಾಲ್ ಸೇವಾ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬಂಜಾರ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
3.40 ಕೋಟಿ ವೆಚ್ಚದಲ್ಲಿ ಭವನ ನಿರ್ಮಿಸಲಾಗಿದೆ. ತಾಂಡಾಗಳ ಮೂಲಭೂತ ಸೌಲಭ್ಯಕ್ಕೆ 50 ಕೋಟಿ ವೆಚ್ಚ ಮಾಡಲಾಗಿದೆ. 500ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗಿದೆ. 10 ಸಾವಿರ ಲಂಬಾಣಿ ಯುವಕ, ಯುವತಿಯರಿಗೆ ಕೌಶಲ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಮಾತನಾಡಿ, ಜಾತಿ ವ್ಯವಸ್ಥೆ ಮನುಷ್ಯನನ್ನು ಕುಗ್ಗಿಸಿದೆ. ಜಾತಿ, ಉಪಜಾತಿ ಎಂದು ಒಡೆದು ಚೂರಾದರೆ ಅವಕಾಶ ದೂರವಾಗುತ್ತದೆ. ಜಾತೀಯತೆ ಇಲ್ಲದಿದ್ದರೆ ಭಾರತ ಮತ್ತಷ್ಟು ಶಕ್ತಿಯುತವಾಗುತ್ತಿತ್ತು. ತಳ ಸಮುದಾಯವನ್ನು ಸಮಾಜದ ಮುನ್ನೆಲೆಗೆ ತರುವ ಉದ್ದೇಶದಿಂದ ಸಂವಿಧಾನದಲ್ಲಿ ಕಾನೂನಾತ್ಮಕವಾಗಿ ಶಕ್ತಿ ಕೊಡಲಾಯಿತು. ದುರ್ದೈವದ ಸಂಗತಿ ಇಂದಿಗೂ ಜಾತಿ ವ್ಯವಸ್ಥೆ ಜೀವಂತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಮಾತನಾಡಿ, ರಾಜ್ಯದ 14 ಜಿಲ್ಲೆಗಳಲ್ಲಿ ಬಂಜಾರ ಭವನ ನಿರ್ಮಿಸಲಾಗಿದೆ. ಅನೇಕ ಜನಪರ ಯೋಜನೆ ರೂಪಿಸಲಾಗಿದೆ. ಸಮುದಾಯದ ಸಮಗ್ರ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಲಾಗಿದೆ. ಊರು ಬಿಟ್ಟು ವಲಸೆ ಹೋಗದೆ, ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಸಮಾಜದ ಜನರು ಒಂದಾಗಿರಬೇಕು ಎಂದು ಸಲಹೆ ನೀಡಿದರು.
ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿ, ಚಿತ್ರದುರ್ಗ ಬಂಜಾರ ಗುರಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಎಸ್ಪಿ ಕೆ.ವಿ.ಅಶೋಕ್, ಬಂಜಾರ ಸಮುದಾಯದ ಮುಖಂಡರಾದ ಡಿ.ನಾರಾಯಣ್ ನಾಯಕ್, ಎಚ್.ಬಿ.ಸಿದ್ಯಾನಾಯಕ್, ಜಿ.ರಘುನಾಥ್, ಕುಮಾರ್ ನಾಯಕ್, ದೇನಾ ನಾಯಕ್, ಲೋಹಿತಾ ಬಾಯಿ, ಇಂದಿರಾ ಬಾಯಿ ಮೊದಲಾದವರು ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


