ಬೆಂಗಳೂರು ಸೆಪ್ಟಂಬರ್ 19: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ನಗರದ ಬಡಾವಣೆಗಳಲ್ಲಿ ಮಳೆಯಿಂದ ಉಂಟಾಗುತ್ತಿದ್ದ ಪ್ರವಾಹ ಸಮಸ್ಯೆಯ ಕಡಿವಾಣಕ್ಕೆ ಮರಗಳಿಗೆ ಕೊಡಲಿ ಹಾಕಲು ನಿರ್ಧರಿಸಿದೆ.
ಈ ಹಿಂದೆ ನಾಲ್ಕು ವರ್ಷದಿಂದಲೂ ನಗರದ ನ್ಯೂ ಬಿಇಎಲ್ ರಸ್ತೆಯ ಟೋನಿಡಾಲರ್ಸ್ ಕಾಲೋನಿಯಲ್ಲಿ ಮಳೆಗಾದಲ್ಲಿ ಜಲಾವೃತ ಸಮಸ್ಯೆ ಉಂಟಾಗುತ್ತಿದೆ. ಈ ಸಂಬಂಧ ಈ ಸಮಸ್ಯೆ ಬಗೆಹರಿಸಲು ಬಿಬಿಎಂಪಿ ಇಲ್ಲಿನ ರಾಜಕಾಲುವೆ (ಚರಂಡಿಯನ್ನು) ಅಗಲಗೊಳಿಸಲು ತೀರ್ಮಾನಿಸಿದೆ. ಅದಕ್ಕಾಗಿ ಸುಮಾರು 60 ಮರಗಳನ್ನು ಧರೆಗುರುಳಿಸಲು ನಿರ್ಧರಿಸಿದೆ. ಹೀಗಾಗಿ ಇಲ್ಲಿನ ನಿವಾಸಿಗಳು ಬಿಬಿಎಂಪಿ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಈ ಕಾಲೋನಿಯಲ್ಲಿ ಕೊಳಚೆ ಸಹಿತ ದುರ್ನಾತ, ಗಬ್ಬು ವಾಸನೆ ಬೀರುವ ನೀರು ನಿರಂತರವಾಗಿ ಹರಿಯುತ್ತಲೇ ಇರುತ್ತದೆ. ಹೀಗಾಗಲೂ ಈ ಭಾಗದಲ್ಲಿ ಕೊಳಚೆ ನೀರು ಸಮರ್ಪಕವಾಗಿ ಹರಿಯದಿರುವುದು ಎಂದು ಸ್ಥಳಿಯರು ದೂರಿದ್ದರು. ಈ ಬಗ್ಗೆ ಗಮನ ಹರಿಸಿರುವ ಬಿಬಿಎಂಪಿ ಅಧಿಕಾರಿಗಳು ಪಕ್ಕದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕಚೇರಿಯ ಸಮೀಪದ ಮಳೆನೀರು ಚರಂಡಿಯನ್ನು ವಿಸ್ತರಿಸಲು ಪಾಲಿಕೆ ಮುಂದಾಗಿದೆ. ಇಲ್ಲಿನ ಸಮಸ್ಯೆ ಬಗೆಹರಿಸಬೇಕಾದರೆ ಚರಂಡಿ ಮೇಲೆಲ್ಲ ಆವರಿಸಿರುವ ದಟ್ಟವಾದ ಅನೇಕ ಮರಗಳ ಪೈಕಿ ಕನಿಷ್ಠ 60ಮರಗಳನ್ನು ತೆರವು ಮಾಡಬೇಕಿದೆ ಎಂದು ಮಳೆನೀರು ಒಳಚರಂಡಿ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಭಾಗದಲ್ಲಿ ಒಳಚರಂಡಿ ಒತ್ತುವರಿ ಮಾಡಿಕೊಂಡಿರುವ ಮನೆಗಳಿಂದ ನಿತ್ಯ ತ್ಯಾಜ್ಯವನ್ನು ಇಲ್ಲಿಯೇ ಸುರಿಯಲಾಗುತ್ತಿದೆ. ಚರಂಡಿಯನ್ನು ಅಗಲಗೊಳಿಸುವುದೇ ಪರಿಹಾರದ ಭಾಗವೆಂದಾಗಲಿ ಅಥವಾ ಮರ ನಾಶ ಮಾಡುವುದೇ ಮುಖ್ಯ ಎಂದು ನಾವು ಭಾವಿಸಿಲ್ಲ. ಈ ಕಾರಣಕ್ಕೆ ಬಿಬಿಎಂಪಿ ಒತ್ತುವರಿ ತೆರವು ಮಾಡಿ ಒಳಚರಂಡಿ ಅಗಲೀಕರಣಗೊಳಿಸಲು ಚಿಂತನೆ ನಡೆಸಿದೆ.
ಕೆಲವು ನಿವಾಸಿಗಳು ಮಳೆನೀರು ಚರಂಡಿಯನ್ನು ವೈಯಕ್ತಿಕ ಡಂಪಿಂಗ್‌ಯಾರ್ಡ್ ಆಗಿ ಬಳಸುತ್ತಿದ್ದಾರೆ. ಇದು ನಿಲ್ಲಬೇಕು ಎಂದು ಇಲ್ಲಿನ ಬಹುಕಾಲದ ನಿವಾಸಿಯೊಬ್ಬರು ಸಮಸ್ಯೆ ಕುರಿತು ತಿಳಿಸಿದ್ದಾರೆ. ಚರಂಡಿ ಅಗಲೀಕರಣದ ಗುತ್ತಿಗೆ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಅಗಲೀಕರಣ ಯೋಜನೆಗೆ ಸುಮಾರು 16 ಕೋಟಿ ರೂ. ತಗುಲಬಹುದು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಡಾಲರ್ಸ್ ಕಾಲೋನಿಯಲ್ಲಿನ ರಾಜಕಾಲುವೆ ತಡೆಗೋಡೆ ಕುಸಿದಿದೆ. ಈ ತಡೆಗೋಡೆ ಮರು ನಿರ್ಮಿಸಿ ಚರಂಡಿ ಅಗಲೀಕರಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ ಎಂದು ಬಿಬಿಎಂಪಿ ತಿಳಿಸಿದೆ. ಬಿಬಿಎಂಪಿಯು ಯೋಜನೆಗಾಗಿ ಅಲ್ಲಿನ ಮರಗಳನ್ನು ಕಡಿಯಲು ಬಿಡುವುದಿಲ್ಲ ಎಂದು ಆರ್‌ಎಂವಿ ಎರಡು ಮತ್ತು ಮೂರನೇ ಬ್ಲಾಕ್ ನಿವಾಸಿಗಳ ಕಲ್ಯಾಣ ಸಂಘದ ಸದಸ್ಯರು ತಿಳಿಸಿದ್ದಾರೆ.
ಅತಿಕ್ರಮಣ ಪ್ರದೇಶಗಳಲ್ಲಿ ಮನೆ ನಿರ್ಮಾಣ, ಆ ಮನೆಗಳಿಂದ ರಾಜಕಾಲುವೆ ಒತ್ತುವರಿ ಹಾಗೂ ಅವೈಜ್ಞಾನಿಕ ಕೊಳಾಯಿಗಳಿಂದ ಸಮಸ್ಯೆ ಉಂಟಾಗಿದೆ. ಮನೆಗಳ ಕೊಳಚೆ ನೀರು ರಾಜಕಾಲುವೆಗೆ ಸೇರುತ್ತಿದೆ. ಭಾರಿ ಪ್ರಮಾಣದಲ್ಲಿ ಮಳೆ ಆದಾಗ ಕೊಳಚೆ ನೀರು ಸಹಿತ ಮಳೆ ನೀರು ಉಕ್ಕಿ ಹರಿದು ಸಮಸ್ಯೆ ಉಲ್ಬಣಿಸುತ್ತಿದೆ. ಆದಾಗಿಯೂ ಸಹ ಇಲ್ಲಿನ ನಿವಾಸಿಗಳು ಬೆಳೆದು ನಿಂತರ ಮರಗಳನ್ನು ಕಡಿಯಲು ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಇಲ್ಲಿನ ಮರಗಳನ್ನು ಕಡಿಯದೇ ಬೇರೆಡೆ ಸ್ಥಳಾಂತರಿಸಲು ಬಿಬಿಎಂಪಿಯು ಅರಣ್ಯ ಇಲಾಖೆಯೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಬಿಬಿಎಂಪಿಯ ಒಳಚರಂಡಿ ವಿಭಾಗದ ಅಧಿಕಾರಿ ತಿಳಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy