ಕೃತಕ ಬುದ್ಧಿಮತ್ತೆ (AI) ಆಪ್ ಗಳಿಗೆ ಫೋಟೋ ಅಪ್ ಲೋಡ್ ಮಾಡುವುದು ಈಗ ತುಂಬಾ ಸುಲಭವಾಗಿದೆ. ಫೋಟೋ ಆಯ್ಕೆ ಮಾಡಿ, ಅದರಲ್ಲಿ ಏನು ಬದಲಾವಣೆ ಬೇಕು ಅಥವಾ ಏನು ವಿಶ್ಲೇಷಿಸಬೇಕು ಎಂದು ಸೂಚನೆ ನೀಡಿದರೆ ಸಾಕು. ಕೆಲವೇ ಸೆಕೆಂಡುಗಳಲ್ಲಿ AI ಫಲಿತಾಂಶವನ್ನು ನೀಡುತ್ತದೆ.
ಆದರೆ ಫೋಟೋ ಅಪ್ ಲೋಡ್ ಮಾಡಿದ ನಂತರ ಅದರ ಹಿಂದೆ ಏನಾಗುತ್ತದೆ ಎಂಬುದನ್ನು ಬಹುತೇಕ ಜನರು ಗಮನಿಸುವುದಿಲ್ಲ. ನೀವು ಕಳುಹಿಸಿದ ಚಿತ್ರ ನೇರವಾಗಿ ನಿಮ್ಮ ಮೊಬೈಲ್ ನಲ್ಲೇ ಸಂಸ್ಕರಣೆಯಾಗುತ್ತದೆಯೇ ಅಥವಾ ಕಂಪನಿಯ ಸರ್ವರ್ ಗೆ ಹೋಗುತ್ತದೆಯೇ? ಎಷ್ಟು ಸಮಯದವರೆಗೆ ಅದು ಅಲ್ಲಿ ಉಳಿಯುತ್ತದೆ? AI ತರಬೇತಿಗೆ ಬಳಸಲಾಗುತ್ತದೆಯೇ? ಇಂತಹ ಪ್ರಶ್ನೆಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಫೋಟೋ ಎಲ್ಲಿಗೆ ಹೋಗುತ್ತದೆ?
ಹೆಚ್ಚಿನ AI ಆಪ್ಗಳು ಕ್ಲೌಡ್ ಸರ್ವರ್ ಗಳ ಮೂಲಕ ಚಿತ್ರಗಳನ್ನು ಸಂಸ್ಕರಿಸುತ್ತವೆ. ಅಂದರೆ ನೀವು ಮೊಬೈಲ್ನಿಂದ ಅಪ್ಲೋಡ್ ಮಾಡಿದ ಫೋಟೋ ಕಂಪನಿಯ ದೂರದ ಸರ್ವರ್ಗೆ ಹೋಗಬಹುದು. ಅಲ್ಲಿ AI ವ್ಯವಸ್ಥೆ ಚಿತ್ರವನ್ನು ವಿಶ್ಲೇಷಿಸಿ, ನೀವು ಕೇಳಿದಂತೆ ಬದಲಾವಣೆ ಮಾಡಿ ಅಥವಾ ಮಾಹಿತಿ ನೀಡಿ ಫಲಿತಾಂಶವನ್ನು ನಿಮ್ಮ ಮೊಬೈಲ್ ಗೆ ಕಳುಹಿಸುತ್ತದೆ.
ಇದರಿಂದ ಕಡಿಮೆ ಸಾಮರ್ಥ್ಯದ ಮೊಬೈಲ್ನಲ್ಲೂ ಅತ್ಯಾಧುನಿಕ AI ಫೋಟೋ ಎಡಿಟಿಂಗ್ ಸಾಧ್ಯವಾಗುತ್ತದೆ. ಆದರೆ ಕೆಲವು AI ವ್ಯವಸ್ಥೆಗಳು ನಿರ್ದಿಷ್ಟ ಕೆಲಸಗಳನ್ನು ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲೇ ಸಂಸ್ಕರಿಸುವ ‘ಆನ್–ಡಿವೈಸ್ ಪ್ರೊಸೆಸಿಂಗ್’ ಸೌಲಭ್ಯವನ್ನೂ ನೀಡುತ್ತಿವೆ. ಹೀಗಾಗಿ ಎಲ್ಲಾ AI ಆಪ್ ಗಳಲ್ಲೂ ಫೋಟೋ ನಿರ್ವಹಿಸುವ ವಿಧಾನ ಒಂದೇ ಆಗಿರುವುದಿಲ್ಲ.
‘ಡಿಲೀಟ್’ ಮಾಡಿದರೆ ತಕ್ಷಣವೇ ಅಳಿಸಿಬಿಡುತ್ತದೆಯೇ?
ಇದು ಬಳಸುತ್ತಿರುವ AI ಸೇವೆಯ ನಿಯಮಗಳ ಮೇಲೆ ಅವಲಂಬಿತವಾಗಿರುತ್ತದೆ. ಕೆಲವು ಸೇವೆಗಳು ಚಿತ್ರವನ್ನು ನಿರ್ದಿಷ್ಟ ಅವಧಿಗೆ ಸಂಗ್ರಹಿಸಬಹುದು. ಸುರಕ್ಷತಾ ಪರಿಶೀಲನೆ, ದುರ್ಬಳಕೆ ತಡೆ ಅಥವಾ ಸೇವೆಯ ಗುಣಮಟ್ಟ ಸುಧಾರಣೆಗಾಗಿ ಕೆಲವು ಮಾಹಿತಿಯನ್ನು ಬಳಸುವ ಸಾಧ್ಯತೆಯೂ ಇರುತ್ತದೆ.
ಕೆಲವು ಸೇವೆಗಳಲ್ಲಿ ಬಳಕೆದಾರರ ಸೆಟ್ಟಿಂಗ್ ಗಳ ಆಧಾರದ ಮೇಲೆ ಚಟುವಟಿಕೆಗಳನ್ನು ಉಳಿಸಿಕೊಳ್ಳುವ ವ್ಯವಸ್ಥೆಯಿರಬಹುದು. ಕೆಲವು ಸಂದರ್ಭಗಳಲ್ಲಿ ಸೇವೆಯ ಸುಧಾರಣೆ ಅಥವಾ ಸುರಕ್ಷತೆಗಾಗಿ ಮಾನವ ಪರಿಶೀಲನೆಯೂ ನಡೆಯಬಹುದು.ಹೀಗಾಗಿ ‘ಫೋಟೋ ಅಪ್ಲೋಡ್ ಮಾಡಿದೆ, ಕೆಲಸ ಮುಗಿದ ಮೇಲೆ ಡಿಲೀಟ್ ಮಾಡಿದೆ’ ಎಂದರೆ ಆ ಚಿತ್ರಕ್ಕೆ ಸಂಬಂಧಿಸಿದ ಎಲ್ಲಾ ಡೇಟಾ ತಕ್ಷಣವೇ ಸಂಪೂರ್ಣವಾಗಿ ಅಳಿಸಲಾಗಿದೆ ಎಂದು ಅರ್ಥವಲ್ಲ.
ಫೋಟೋದಲ್ಲಿ ಕಾಣುವ ವ್ಯಕ್ತಿ ಅಥವಾ ವಸ್ತುವಷ್ಟೇ ಅಲ್ಲ, ಅದರ ಹಿಂದೆ ಇನ್ನಷ್ಟು ಮಾಹಿತಿ ಇರಬಹುದು. ಕೆಲವು ಫೋಟೋಗಳಲ್ಲಿ ತೆಗೆದ ಸಮಯ, ಬಳಸಿದ ಸಾಧನ ಹಾಗೂ ಸ್ಥಳದ ಮಾಹಿತಿಯಂತಹ ಮೆಟಾಡೇಟಾ ಇರಬಹುದು.ಇದಲ್ಲದೆ ಮನೆಯ ಒಳಭಾಗ, ಗುರುತಿನ ಚೀಟಿ, ಪಾಸ್ಪೋರ್ಟ್, ಬ್ಯಾಂಕ್ ದಾಖಲೆ, ಕಚೇರಿಯ ರಹಸ್ಯ ಮಾಹಿತಿ ಅಥವಾ ಕಂಪ್ಯೂಟರ್ ಪರದೆಯ ಫೋಟೋಗಳನ್ನು ಅಪ್ಲೋಡ್ ಮಾಡಿದರೆ ಚಿತ್ರದಲ್ಲಿರುವ ಮಾಹಿತಿಯೇ ಸೂಕ್ಷ್ಮ ವಿವರಗಳನ್ನು ಬಹಿರಂಗಪಡಿಸಬಹುದು.ಉದಾಹರಣೆಗೆ, ಗುರುತಿನ ಚೀಟಿಯ ಫೋಟೋವನ್ನು AIಗೆ ಕಳುಹಿಸಿದರೆ ಅದರಲ್ಲಿರುವ ಹೆಸರು, ವಿಳಾಸ, ಜನ್ಮ ದಿನಾಂಕ ಅಥವಾ ಇತರ ವಿವರಗಳು ಚಿತ್ರದಲ್ಲೇ ಸ್ಪಷ್ಟವಾಗಿ ಕಾಣಿಸಬಹುದು.
ಯಾವ ಫೋಟೋಗಳನ್ನು AIಗೆ ಹಾಕಬಾರದು?
ಅಗತ್ಯವಿಲ್ಲದಿದ್ದರೆ ಪಾಸ್ ಪೋರ್ಟ್, ಆಧಾರ್ ಅಥವಾ ಇತರ ಗುರುತಿನ ದಾಖಲೆಗಳು, ಬ್ಯಾಂಕ್ ದಾಖಲೆಗಳು, ಕಚೇರಿಯ ಗೌಪ್ಯ ದಾಖಲೆಗಳು ಮತ್ತು ಇತರರ ಖಾಸಗಿ ಫೋಟೋಗಳನ್ನು AI ಆಪ್ಗಳಿಗೆ ಅಪ್ ಲೋಡ್ ಮಾಡದಿರುವುದು ಸುರಕ್ಷಿತ.
AI ಫೋಟೋ ಎಡಿಟಿಂಗ್ ಆಪ್ ಬಳಸುವ ಮೊದಲು ಅದರ Privacy Policy ಮತ್ತು Privacy Settings ಪರಿಶೀಲಿಸಿ. ನಿಮ್ಮ ಫೋಟೋವನ್ನು ಎಷ್ಟು ದಿನ ಸಂಗ್ರಹಿಸಲಾಗುತ್ತದೆ, AI ಮಾದರಿ ತರಬೇತಿಗೆ ಬಳಸಲಾಗುತ್ತದೆಯೇ, ಮಾನವ ಪರಿಶೀಲನೆ ನಡೆಯುತ್ತದೆಯೇ ಮತ್ತು ಅಳಿಸುವಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿ.
AI ಆಪ್ಗಳು ಹೆಚ್ಚು ಬುದ್ಧಿವಂತವಾಗುತ್ತಿರುವಂತೆ ಅವುಗಳಿಗೆ ನಾವು ನೀಡುವ ಮಾಹಿತಿಯ ಪ್ರಮಾಣವೂ ಹೆಚ್ಚುತ್ತಿದೆ. ಆದ್ದರಿಂದ ಯಾವುದೇ ಫೋಟೋವನ್ನು ಅಪ್ಲೋಡ್ ಮಾಡುವ ಮೊದಲು ಒಂದು ಪ್ರಶ್ನೆ ಕೇಳಿಕೊಳ್ಳುವುದು ಉತ್ತಮ:“ಈ ಫೋಟೋ ನನ್ನ ಮೊಬೈಲ್ ನಿಂದ ಹೊರಗೆ ಹೋದ ನಂತರ ಅದಕ್ಕೆ ಏನಾಗಬಹುದು?”ಈ ಪ್ರಶ್ನೆಗೆ ಉತ್ತರ ತಿಳಿದ ಬಳಿಕವೇ ವೈಯಕ್ತಿಕ ಫೋಟೋವನ್ನು AI ಸೇವೆಗೆ ಅಪ್ ಲೋಡ್ ಮಾಡುವುದು ಹೆಚ್ಚು ಸುರಕ್ಷಿತ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
