ಮಧುಗಿರಿ: ಕೊವಿಡ್ ಹಾಗೂ ಸಾಂಕ್ರಾಮಿಕ ರೋಗಗಳು ಹರಡದಂತೆ ಸ್ವಚ್ಛತೆಗೆ ಜನರು ಹೆಚ್ಚಿನ ಮಹತ್ವ ನೀಡುವ ನಿಟ್ಟಿನಲ್ಲಿ ತಾಲೂಕಿನ ಬೇಡತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಲೋಕೇಶ್ ತಮ್ಮ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲಿಯೂ ಗಿಡಗಂಟಿಗಳನ್ನು ತೆರವುಗೊಳಿಸಿ, ಚರಂಡಿ ಸ್ವಚ್ಛಗೊಳಿಸುವ ಮೂಲಕ ಮುನ್ನೆಚ್ಚರಿಕೆ ಕ್ರಮಕೈಗೊಂಡರು.
ನೀರಿನ ತೊಟ್ಟಿ ಸ್ವಚ್ಛಗೊಳಿಸಿ, ಚರಂಡಿಗಳ ಹೂಳು ತೆಗೆದು ನೀರು ಸುಗಮವಾಗಿ ಹರಿಯುವಂತೆ ಮಾಡಲಾಯಿತು. ಇನ್ನು ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಾದ ಸಂತೋಷ್ ಸಿಂಗ್, ಸಮಾಜದಲ್ಲಿ ಗೌರವ ಇರಬೇಕಾದರೆ ನಾವು ಆರೋಗ್ಯಕರ ಮತ್ತು ನೈರ್ಮಲ್ಯದಿಂದ ಬದುಕಬೇಕು. ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೈಜೋಡಿಸಿದ ಅನಿತಾ ಲೋಕೇಶ್ ಅಧ್ಯಕ್ಷರು ಸ್ವಚ್ಛತೆಗೆ ಕಾರಣೀಭೂತರಾಗಿದ್ದಾರೆ ಎಂದು ಹೇಳಿದರು.
ಇನ್ನೂ ಕಾರ್ಯಕ್ರಮದ ಸಂದರ್ಭ ಮಾತನಾಡಿದ ಅನಿತಾ ಲೋಕೇಶ್, ಓಮಿಕ್ರಾನ್ ಸೋಂಕು ಸೌಮ್ಯ ಸ್ವಭಾವದ್ದು ಎಂದು ಕೆಲವರು ಭಾವಿಸಿದ್ದಾರೆ. ಆದರೆ, ಇದು ವೇಗವಾಗಿ ಕಾಡ್ಗಿಚ್ಚಿನಂತೆ ಇಡೀ ವಿಶ್ವವನ್ನೇ ಆವರಿಸುತ್ತಿದೆ. ಈ ಹೊಸ ರೂಪಾಂತರವು ಹಿಂದಿನ ತಳಿಗಿಂತ ಸಾಂಕ್ರಾಮಿಕವಾಗಿದೆ. ಗಂಭೀರವಾದ ರೋಗವನ್ನುಂಟು ಮಾಡುತ್ತದೆ. ಹಾಗಾಗಿ ಇದನ್ನು ನಿರ್ಲಕ್ಷಿಸುವಂತಿಲ್ಲ ಎಂದು ಜಾಗೃತಿ ಮೂಡಿಸಿದರು.
ಚರಂಡಿಯ ಸ್ವಚ್ಛತೆ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ, ಜನರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಇದೇ ವೇಳೆ ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.
ವರದಿ: ಮಹಾಲಿಂಗಯ್ಯ ಡಿ.ಎಲ್.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy