ಬೆಳಗಾವಿ: ಕಳೆದ ಎರಡು ವರ್ಷಗಳ ನಂತರ ನಡೆಯುತ್ತಿರುವ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಬರದ ಸಿದ್ದತೆ ನಡೆದಿದ್ದು, ನಗರ ಸ್ವಚ್ಚತೆಗೆ ಮಹಾನಗರ ಪಾಲಿಕೆ ತೊಡಗಿಸಿಕೊಂಡಿದೆ. ಜೊತೆಗೆ ಪೊಲೀಸ್ ಇಲಾಖೆ ಕೂಡಾ ಸಕಲ ಸಿದ್ದತೆ ಮಾಡಿಕೊಂಡಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದೆ.
ನಗರದ ಸುವರ್ಣಸೌಧದಲ್ಲಿ ನಡೆಯಲಿರುವ ಅಧಿವೇಶನಕ್ಕೆ ಈಗಾಗಲೇ ಬೆಂಗಳೂರಿನ ಸಚಿವಾಲಯಗಳು ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಬೆಳಗಾವಿಗೆ ಸ್ಥಳಾಂತರವಾಗುತ್ತಿದ್ದು ಜಿಲ್ಲಾ ಮಟ್ಟದಲ್ಲಿಯೂ ಹಲವು ಏರ್ಪಾಡು ಮಾಡಿಕೊಳ್ಳಲಾಗುತ್ತಿದೆ. ಸಂಪೂರ್ಣ ಅಧಿವೇಶನಕ್ಕೆಂದು ರಾಜ್ಯದ ವಿವಿಧ ಭಾಗಗಳಿಂದ ಮೂರು ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಎಲ್ಲಾ ಅಧಿಕಾರಿಗಳಿಗೆ ಉಳಿದುಕೊಳ್ಳಲು ಟೆಂಟ್ ಹಾಕಲಾಗಿದೆ. ಜೊತೆಗೆ ಪೊಲೀಸರಿಗೆ ಊಟ, ವಸತಿ ಹಾಗೂ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ.
ಅಧಿವೇಶನ ಹಿನ್ನಲೆಯಲ್ಲಿ ಈಗಾಗಲೇ ನಗರದ ಸ್ವಚ್ಚತಾ ಕಾರ್ಯ ಕೈಗೊಳ್ಳಲಾಗುತ್ತಿದ್ದು ವಿವಿಧ ವೃತ್ತಗಳಿವೆ ಬಣ್ಣ ಬಳಿಯುವ ಕಾರ್ಯ ನಡೆಯುತ್ತಿದೆ. ರಾಜ್ಯದ ನಾನಾ ಭಾಗಗಳಿಂದ ಜನರು ಬೆಳಗಾವಿಗೆ ಆಗಮಿಸಲಿರುವ ಹಿನ್ನಲೆಯಲ್ಲಿ ನಗರವನ್ನು ಸ್ವಚ್ಚವಾಗಿಡಲು ಮಹಾನಗರ ಪಾಲಿಕೆ ಶ್ರಮಿಸುತ್ತಿದೆ. ಅಷ್ಟೇ ಅಲ್ಲದೇ ಅಧಿವೇಶನಕ್ಕೆ ಆಗಮಿಸುವ ಸಚಿವರು, ಶಾಸಕರು ಸೇರಿದಂತೆ ಅಧಿಕಾರಿಗಳಿಗೆ ಹಾಗೂ ಪತ್ರಕರ್ತರಿಗೆ ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಕೊವಿಡ್ ಮೂರನೇ ಅಲೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಅಧಿವೇಶನದ ಮೇಲೆ ಕೊರೊನಾ ಕರಿನೆರಳು ಬೀರಿದ್ದು ಮುನ್ನೆಚ್ಚರಿಕೆಯಾಗಿ ಕೊರೊನಾ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಆರ್ಟಿಪಿಸಿಆರ್ ನಲ್ಲಿ ನೆಗೆಟಿವ್ ವರದಿ ಬಂದವರಿಗೆ ಮಾತ್ರ ಸುವರ್ಣಸೌಧಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಕಳೆದ ಒಂದು ವಾರದಿಂದ ಬೆಳಗಾವಿಯಲ್ಲಿ ತಲಾ ಒಂದು ಕೊರೊನಾ ಕೇಸ್ ಪತ್ತೆಯಾಗಿದ್ದು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ.
ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಎಂಇಎಸ್ ಸಂಘಟನೆ ನಡೆಸುವ ಮಹಾಮೇಳಾವ್ ಗೆ ಜಿಲ್ಲಾಡಳಿತ ಈವರೆಗೆ ಅವಕಾಶ ಕಲ್ಪಿಸಿಲ್ಲ. ನಾಡ ವಿರೋಧಿ ಕೆಲಸಕ್ಕೆ ಎಂಇಎಸ್ ಮ,ಹಾ ಮೇಳಾವ್ ನಡೆಸುತ್ತದೆ, ಇದಕ್ಕೆ ಅವಕಾಶ ಕಲ್ಪಿಸಬಾರದೆಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ. ಈ ಕುರಿತು ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ವಿಕ್ರಂ ಆಮ್ಟೆ ಸ್ಪಷ್ಟನೆ ನೀಡಿದ್ದು. ಅನಧಿಕೃತವಾಗಿ ಎಂಇಎಸ್ ಮಹಾ ಮೇಳಾವ್ ನಡೆಸಿದರೆ ಕ್ರಮ ಕೈಗೊಳ್ಳುವ ಎಚ್ಚರಿಗೆ ನೀಡಿದೆ.
ಈಗಾಗಲೇ ಅಧಿವೇಶನದ ಪೂರ್ವ ಸಿದ್ದತೆ ನಡೆದಿದ್ದು ಕೊರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ಆರ್ ಟಿ ಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಅಧಿವೇಶನದಲ್ಲಿ ಪಾಲ್ಗೊಳ್ಳುವ ಶಾಸಕರು, ಸಚಿವರು ಹಾಗೂ ಅಧಿಕಾರಿಗಳಿಗೆ ಮೂರು ಡೋಸ್ ಲಸಿಕೆ ಆಗಿರಬೇಕು. ಜೊತೆಗೆ ಕೊರೊನಾ ಮಾರ್ಗಸೂಚಿ ಅನ್ವಯ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700