ಗುರುಗದಹಳ್ಳಿ: ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯಪೂರ್ವದಿಂದಲೂ ದೇಶದ ಬಗ್ಗೆ ಚಿಂತನೆ ಮಾಡುತ್ತಾ ಬೆಳೆದು ಬಂದಿರುವ ಪಕ್ಷವಾಗಿದೆ ಎಂದು ಮಾಜಿ ಶಾಸಕ ಕೆ ಷಡಕ್ಷರಿ ಹೇಳಿದರು.
ತಿಪಟೂರು ತಾಲೂಕಿನ ಹೋನವಳ್ಳಿ ಹೋಬಳಿಯ ಗುರುಗದಹಳ್ಳಿ ಗ್ರಾಮದ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಗಾಂಧಿ ನಡೆಗೆ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಶೇಕಡ 90ಕ್ಕೂ ಅಧಿಕ ಪಾಲು ಕಾಂಗ್ರೆಸ್ ಸರ್ಕಾರದ್ದು ಎಂದು ಅವರು ಹೇಳಿದರು.
ಬಿಜೆಪಿ ಖಾಸಗೀಕರಣ, ಬೆಲೆ ಏರಿಕೆಗೆ ಆದ್ಯತೆ ನೀಡಿದೆಯೇ ಹೊರತು ಜನರನ್ನು ಆರ್ಥಿಕವಾಗಿ ಸದೃಢನಾಗಿರುವ ಯಾವುದೇ ಯೋಜನೆ ಜಾರಿಗೆ ತರುವಲ್ಲಿ ವಿಫಲವಾಗಿದೆ. ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬ ಸಮುದಾಯಗಳು ಇಂದಿಗೂ ಕಷ್ಟದಲ್ಲಿವೆ ಅವರಿಗೆ ಸಹಕಾರ ನೀಡುವ ಬದಲು ಬೆಲೆ ಏರಿಕೆ ಬಿಸಿ ನೀಡಿ ಕುಟುಂಬ ನಿರ್ವಹಣೆ ಮಾಡಲಾಗದೆ ಜನಸಾಮಾನ್ಯರು ಬೀದಿಗೆ ಬರುವಂತಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ತಾಲೂಕಿನಲ್ಲಿ ಕಳೆದ ಬಾರಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಆದರೆ ಈ ಬಾರಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ನಮ್ಮ ಕಾಲದದಲ್ಲಿ ಆಗಿರುವ ಕೆಲಸಗಳನ್ನು ಉದ್ಘಾಟಿಸುವಲ್ಲಿ ಕಾರ್ಯನಿರತ ಆಗಿರುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ವ್ಯಂಗ್ಯವಾಡಿದ ಅವರು ತಾಲೂಕಿನಲ್ಲಿ ಅಗತ್ಯಗಳನ್ನು ಅರಿತು ಸಚಿವರು ಕಾರ್ಯನಿರ್ವಹಣೆ ಮಾಡಬೇಕು ಎಂದು ಒತ್ತಾಯಿಸಿದರು.
ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಡೆನೂರು ಕಾಂತರಾಜು ಮಾತನಾಡಿ,ಇನ್ನಾದರೂ ಜನಸಾಮಾನ್ಯರ ಎಚ್ಚರಿಕೆ ವಹಿಸುವ ಅಗತ್ಯವಿದೆ. ಕೇವಲ ಮಾತಿನ ಮೋಡಿಗೆ ಒಳಗಾಗಿ ಮತ ನೀಡದೆ, ಅಭಿವೃದ್ಧಿ ಮಾಡಿದವರಿಗೆ ಮತ ನೀಡಬೇಕು. ದೇಶದ ಆರ್ಥಿಕತೆ ಅಭಿವೃದ್ಧಿಗೆ ಹತ್ತು ವರ್ಷ ಪ್ರಧಾನಿಯಾಗಿದ್ದ ಡಾ.ಮನಮೋಹನ್ ಸಿಂಗ್ ಅವರು ಅಪಾರ ಕೊಡುಗೆ ನೀಡಿದ್ದರು. ಅಂದಿನ ಅಭಿವೃದ್ಧಿ ಕಾರ್ಯಗಳಿಂದ ದೇಶದಲ್ಲಿ ಆರ್ಥಿಕ ಪರಿಸ್ಥಿತಿಗಳು ಸುಧಾರಣೆ ಆಗಿತ್ತು. ಆದರೆ ಇದೀಗ ಕಾರ್ಪೊರೇಟ್ ಕಂಪನಿಗಳ ಗುಲಾಮರಂತೆ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಯೋಗೇಶ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ ತಿಮ್ಮೇಗೌಡ ಗೌಡನಕಟ್ಟೆ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ಬಸವರಾಜು ಗೌಡನಕಟ್ಟೆ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ರೋಷನ್ ಬೇಗ್ ಗುರುಗದಹಳ್ಳಿ ಸಿಂಗೇನಹಳ್ಳಿ ಜಯಣ್ಣ ಬ್ಲಾಕ್ ಕಾಂಗ್ರೆಸ್ ಮುಖಂಡರು ಮತ್ತು ಗ್ರಾಮಸ್ಥರು ಹಾಜರಿದ್ದರು.
ವರದಿ: ಮಂಜು ಗುರುಗದಹಳ್ಳಿ.