ಹಾಸನ: ಕುಡಿದ ಮತ್ತಿನಲ್ಲಿ ಚಾಲಕ ಲಾರಿ ಚಲಾಯಿಸಿದ ಪರಿಣಾಮ ಸರಣಿ ಅಪಘಾತ ಸಂಭವಿಸಿದ್ದು, ಪರಿಣಾಮವಾಗಿ ಅವಳಿ ಮಕ್ಕಳು ಸೇರಿದಂತೆ ತಾಯಿ ಸಾವನ್ನಪ್ಪಿದ್ದಾರೆ.
ಹಾಸನ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ 8 ರ ಸುಮಾರಿಗೆ ಭೀಕರ ಅಪಘಾತ ಸಂಭವಿಸಿದೆ. ಪ್ರಣತಿ (3), ಪ್ರಣವ್(3) ಮತ್ತು ಜ್ಯೋತಿ ಮೃತರು. ಪ್ರಣತಿ, ಪ್ರಣವ್ ಇಬ್ಬರೂ ಅವಳಿ ಮಕ್ಕಳಾಗಿದ್ದಾರೆ.
ತಂದೆ ಶಿವಾನಂದ್ ಹಾಗೂ ತಾಯಿ ಜ್ಯೋತಿ ಜೊತೆ ಮಕ್ಕಳು ಬೈಕ್ ನಲ್ಲಿ ಹೋಗುತ್ತಿದ್ದರು. ಈ ವೇಳೆ ಸುಮಾರು ನಾಲ್ಕು ಬೈಕ್ ಗಳಿಗೆ ಡಿಕ್ಕಿ ಹೊಡೆದ ಲಾರಿ, ಎರಡು ಪುಟ್ಟ ಮಕ್ಕಳಿದ್ದ ಬೈಕ್ ಗೂ ಡಿಕ್ಕಿ ಹೊಡೆದಿದೆ ಪರಿಣಾಮ ಮಕ್ಕಳಿಬ್ಬರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ತಾಯಿ ಕೂಡ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿರುವ ಮಕ್ಕಳ ತಂದೆ ಶಿವಾನಂದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಡಿದ ಮತ್ತಿನಲ್ಲಿ ಮನಬಂದಂತೆ ಲಾರಿ ಚಲಾಯಿಸಿದ ಚಾಲಕ ಅಪಘಾತಕ್ಕೆ ಕಾರಣವಾಗಿದ್ದಲ್ಲದೇ, ಅಪಘಾತದ ನಂತರವೂ ಲಾರಿ ನಿಲ್ಲಿಸದೆ ವೇಗವಾಗಿ ಹೋಗಿದ್ದಾನೆ. ಇದರಿಂದ ಸುಮಾರು ಎರಡು ಕಿಲೋಮೀಟರ್ ದೂರದವರೆಗೂ ಬೈಕ್ ನ್ನು ಲಾರಿ ಎಳೆದುಕೊಂಡು ಹೋಗಿದೆ. ಪರಿಣಾಮವಾಗಿ ಲಾರಿಯ ಟಯರ್ ನಡಿ ಸಿಲುಕಿ ಸುಮಾರು ಎರಡು ಕಿಲೋ ಮೀಟರ್ ದೂರದವರೆಗೂ ಸಾಗಿದ ಮಗುವಿನ ದೇಹ ಛಿದ್ರಛಿದ್ರವಾಗಿದೆ. ಘಟನೆಯಿಂದ ಪೋಷಕರು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವರದಿ : ಆನಂದ್ ತಿಪಟೂರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700