ಬೀದರ್ : ನಗರದ ಗಾಂಧಿ ಗಂಜ್ ಪೊಲೀಸ್ ಠಾಣೆ ಹಾಗೂ ನೂತನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 94 ಲಕ್ಷ ರೂ.ಗಿಂತ ಅಧಿಕ ಮೌಲ್ಯದ ತಂಬಾಕು ವಸ್ತುಗಳು ಸೇರಿದಂತೆ ಕೃತ್ಯಕ್ಕೆ ಬಳಸಿದ ಒಂದು ಈಚರ್ ಲಾರಿ ಜಪ್ತಿ ಮಾಡಲಾಗಿದ್ದು, 8 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಚಿದ್ರಿಯಲ್ಲಿರುವ ಬುತ್ತಿ ಬಸವಣ್ಣ ಹತ್ತಿರದ ಬಾಡಿಗೆ ಮನೆಯೊಂದರಲ್ಲಿ ಅಕ್ರಮವಾಗಿ ತಂಬಾಕು ವಸ್ತುಗಳ ಕಲಬೆರಕೆ ಗುಟಕಾ ಸಾಮಗ್ರಿ, ಪಾನ್ ಮಸಾಲಾ ಸಂಗ್ರಹಿಸಿಟ್ಟು, ಲಾರಿಯೊಂದರಲ್ಲಿ ಲೋಡ್ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, 1,51,59,775 ರೂ. ಮೌಲ್ಯದ ಗುಟಕಾ ತಯಾರಿಸುವ ವಿವಿಧ ಸಾಮಗ್ರಿಗಳು ಹಾಗೂ 25 ಲಕ್ಷ ರೂ. ಮೌಲ್ಯದ ಈಚರ್ ಲಾರಿ ಜಪ್ತಿ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ 8 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು
ಅದೇ ರೀತಿ ಕೋಳಾರ್ ಕೈಗಾರಿಕಾ ಪ್ರದೇಶದಲ್ಲಿ ಪಾನ್ ಮಸಾಲಾ, ಕೆಮಿಕಲ್ ಹಾಗೂ ಮಾನವನ ಆರೋಗ್ಯಕ್ಕೆ ಹಾನಿಕರವಾದ ಕಚ್ಚಾ ವಸ್ತು ಅಕ್ರಮವಾಗಿ ಸಂಗ್ರಹಿಸಿಟ್ಟಿರುತ್ತಾರೆ. ಇದರ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 43,30,750 ರೂ. ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC